Mysore
21
overcast clouds

Social Media

ಮಂಗಳವಾರ, 22 ಅಕ್ಟೋಬರ್ 2024
Light
Dark

ಎರಡು ಬಾರಿ ಸಿಎಂ ಆಗಿ ಮೈಸೂರಲ್ಲಿ ಒಂದೂ ಮನೆ ಇಲ್ಲ: ಸಿದ್ದರಾಮಯ್ಯ

ವರುಣಾ: ಮುಡಾ ಪ್ರಕರಣದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಸದ್ಯ ವಿರೋಧ ಪಕ್ಷಗಳು ಟೀಕೆಗಳ ಸುರಿಮಳೆಗೈಯ್ಯುತ್ತಿವೆ. ಸಿದ್ದರಾಮಯ್ಯ ಮುಡಾ ಮೂಲಕ ಅಕ್ರಮವಾಗಿ ಹಣ ಗಳಿಸಿದ್ದಾರೆ ಎಂಬ ಆರೋಪವಿದೆ. ಹೀಗೆ ಬಿಜೆಪಿ ಹಾಗೂ ಜೆಡಿಎಸ್‌ ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನಾನು ಲಂಚ ಪಡೆದ ಉದಾಹರಣೆ ಇದೆಯಾ, ನನ್ನ ಮೇಲಿನ ಸುಳ್ಳು ಆರೋಪ ಸಹಿಸ್ತೀರಾ ಎಂದು ಸ್ವಕ್ಷೇತ್ರ ವರುಣದ ಮತದಾರರಿಗೆ ಪ್ರಶ್ನೆ ಹಾಕಿದ್ದಾರೆ.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ 501.81 ಕೋಟಿ ರೂ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಹಲವಾರು ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿ ಮಾತನಾಡಿದ ಅವರು ನಾನು ಮಂತ್ರಿಯಾಗಿ 45 ವರ್ಷ ಆಯ್ತು. ನನ್ನ ಮೇಲೆ ಸಣ್ಣ ಕಪ್ಪುಚುಕ್ಕೆ ಇಲ್ಲ. ಹಿಂದುಳಿದ ವರ್ಗದ ನಾನು ಎರಡು ಬಾರಿ ಸಿಎಂ ಆದೆ ಅಂತ ಬಿಜೆಪಿಗೆ ಹೊಟ್ಟೆಕಿಚ್ಚು. ಇದನ್ನು ನೀವು ಸಹಿಸ್ತೀರಾ ಎಂದು ಮರು ಪ್ರಶ್ನಿಸಿದರು.

ನಾನು ಎರಡು ಬಾರಿ ಸಿಎಂ ಆಗಿ ಮೈಸೂರಲ್ಲಿ ಒಂದೂ ಮನೆ ಇಲ್ಲ. ಮರಿಸ್ವಾಮಿ ಮನೇಲಿ ಇದೀನಿ. ಕುವೆಂಪು ರಸ್ತೇಲಿ 3 ವರ್ಷದಿಂದ ಮನೆ ಕಟ್ಟುತ್ತಲೇ ಇದ್ದೀನಿ. ಇದುವರೆಗೂ ಪೂರ್ತಿ ಆಗಿಲ್ಲ. ನನಗೆ ವರ್ಚಸ್ಸು ಕೊಡುವವರು ನೀವು. ನಿಮ್ಮ ಎದುರಿಗೆ ಪ್ರಾಮಾಣಿಕವಾಗಿ ಇದ್ದೇನೆ ಎಂದರು. ನೀವೇ ನನ್ನ ಮಾಲೀಕರು. ನೀವೇ ನನ್ನ ಯಜಮಾನರು. ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ ಎಂದರು. ಬಿಜೆಪಿ-ಜೆಡಿಎಸ್ ನಾಯಕರ ಹೊಟ್ಟೆಕಿಚ್ಚಿನಿಂದ ನನ್ನ ವರ್ಚಸ್ಸು ಕಡಿಮೆ ಆಗಲ್ಲ. ನನ್ನ ವರ್ಚಸ್ಸು ವರುಣಾ ಜನತೆ, ನನ್ನ ವರ್ಚಸ್ಸು ರಾಜ್ಯದ ಜನತೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಸಚಿವರುಗಳಾದ ಕೆ.ವೆಂಕಟೇಶ್, ರಹೀಂಖಾನ್, ಬೋಸ್ ರಾಜ್, ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ವಿಧಾನಸಭೆ ಮತ್ತು ವಿಧಾನ‌ ಪರಿಷತ್ ಶಾಸಕರುಗಳಾದ ಯತೀಂದ್ರ ಸಿದ್ದರಾಮಯ್ಯ, ರವಿಶಂಕರ್, ದರ್ಶನ್ ದ್ರುವನಾರಾಯಣ್, ತಿಮ್ಮಯ್ಯ, ವರುಣಾ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರುಗಳು, ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳು ಸೇರಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags: