ಹುಣಸೂರು : ಮೂವರು ಮಡದಿಯರ ಪತಿರಾಯ ತನಗೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾನೆ ಎಂದು ಆರೋಪಿಸಿ ನೊಂದ ಎರಡನೇ ಪತ್ನಿ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಳಿಕೆರೆ ಠಾಣಾ ವ್ಯಾಪ್ತಿಯ ದಲ್ಲಾಳುಕೊಪ್ಪಲು ಗ್ರಾಮದ ನಿವಾಸಿ ಮಹದೇವ್ ಮೂರು ಮಡದಿಯರ ಪತಿ. ಈತ ತನ್ನ ಎರಡನೇ ಪತ್ನಿ ನೇತ್ರಾವತಿಗೆ ಮೂರನೇ ಪತ್ನಿಯೆಂದು ಹೇಳುತ್ತಿರುವ ಮಮತಾ ಮತ್ತು ಅತ್ತೆ ಸಿಂಗಮ್ಮ ಈ ಮೂವರು ಸೇರಿಕೊಂಡು ಮನೆಯಿಂದ ಹೊರಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹದೇವನ ಮೊದಲ ಪತ್ನಿ ಎಲ್ಲಿದ್ದಾರೆ? ಯಾರು? ಎನ್ನುವುದು ನನಗೂ ತಿಳಿದಿಲ್ಲ. ತಾನು ಮದುವೆಯದ ನಂತರವಷ್ಟೇ ತನ್ನ ಪತಿಗೆ ಮೊದಲ ಪತ್ನಿ ಇದ್ದಾರೆ ಎಂದು ತಿಳಿಯಿತು ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪತಿ ತನ್ನೊಂದಿಗೆ ಕಳೆದ 7-8 ವರ್ಷಗಳಿಂದ ಸಂಸಾರ ನಡೆಸಿದ್ದು, ಎರಡು ಹೆಣ್ಣುಮಕ್ಕಳು ಇದ್ದಾರೆ. ಇದೀಗ ಮೂರನೇ ಪತ್ನಿ ಎನಿಸಿಕೊಂಡಿರುವ ಮಮತಾ, ಅತ್ತೆ ಸಿಂಗಮ್ಮ ಮತ್ತು ಪತಿ ಸೇರಿಕೊಂಡು ದೈಹಿಕ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾರೆ. ಪತಿಯ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಮಕ್ಕಳೊಂದಿಗೆ ಇದ್ದೆ. ಇದೀಗ ಗುಡಿಸಲಿನಿಂದಲೂ ಹೊರದಬ್ಬಿದ್ದಾರೆ. ಊರು ಬಿಟ್ಟು ಹೋಗು ಎಂದು ಒತ್ತಾಯಿಸುತ್ತಿದ್ದಾರೆ. ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದೇನೆ. ನನಗೆ ನ್ಯಾಯ ಕೊಡಿಸಿ ಎಂದು ನೊಂದ ಮಹಿಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಅಲವತ್ತುಕೊಂಡಿದ್ದರು.
ಇದೀಗ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಮಹದೇವರನ್ನು ಪತ್ತೆ ಹಚ್ಚಲು ಕ್ರಮವಹಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ತಿಳಿಸಿದ್ದಾರೆ.





