ಹುಣಸೂರು: ಮೈಸೂರು-ಹುಣಸೂರು ಹೆದ್ದಾರಿಯ ಸೋಮನಹಳ್ಳಿ ಬಳಿಯಲ್ಲಿ ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿತ್ತು.
ಹುಣಸೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಚಿತ್ರದುರ್ಗ ಮೂಲದ ಓಮಿನಿ ಹಾಗೂ ಮೈಸೂರು ಕಡೆಯಿಂದ ಬರುತ್ತಿದ್ದ ತಮಿಳುನಾಡಿನ ನೋಂದಣಿ ಇರುವ ಮಾರುತಿ ಎಕ್ಸ್‌ವಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಓಮಿನಿ ಸಂಪೂರ್ಣ ನಜ್ಜುಗುಜ್ಜಾಗಿದ್ದರೆ, ಎಕ್ಸ್‌ವಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಎರಡೂ ಕಾರುಗಳಲ್ಲಿದ್ದ 6 ಮಂದಿಗೆ ತೀವ್ರಗಾಯಗಳಾಗಿವೆ. ಸ್ಥಳೀಯರು ಹಾಗೂ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಗಾಯಾಳುಗಳನ್ನು ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ.
ಅಪಘಾತದಿಂದ ಹೆದ್ದಾರಿಯ ಎರಡೂ ಕಡೆ ಸುಮಾರು 2 ಕಿ.ಮೀ.ನಷ್ಟು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಎಚ್.ಡಿ.ಕೋಟೆಯಲ್ಲಿ ನಡೆದ ಹನುಮ ಜಯಂತಿ ಬಂದೋಬಸ್ತ್‌ಗೆ ತೆರಳಿದ್ದರಿಂದಾಗಿ ಬೆರಳೆಣಿಕೆಯಲ್ಲಿದ್ದ ಪೊಲೀಸರು ವಾಹನಗಳನ್ನು ತೆರವುಗೊಳಿಸಲು ಹರಸಾಹಸಪಟ್ಟರು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





