ಹುಣಸೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳ ಮುಷ್ಕರದಿಂದಾಗಿ ಸಾರ್ವಜನಿಕರು ಹುಣಸೂರಿನಲ್ಲಿ ದುಪ್ಪಟ್ಟು ಹಣ ತೆತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣ ಬೆಳೆಸಿದರು.
ನಗರದ ಹೊಸ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್‌ಗಳು ಬಾರದೆ ಬಿಕೋ ಎನ್ನುತ್ತಿತ್ತು. ಆದರೆ ಬೇರೆಡೆಯಿಂದ ಬಂದಿದ್ದ ಬಸ್‌ಗಳು ಡಿಪೋಗಳಿಗೆ ಹೋಗಲು ತೆರಳುತ್ತಿದ್ದರಿಂದ ಹಾಗೂ ಹಳ್ಳಿಗಳಲ್ಲಿ ರಾತ್ರಿ ತಂಗಿದ್ದ ಬಸ್ ಸಂಚಾರದಿಂದಾಗಿ ಬೆಳಿಗ್ಗೆ ಮೈಸೂರಿಗೆ ಬಸ್ಸುಗಳು ಸಂಚರಿಸಿದವು. ಇದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಕೊಂಚ ನಿಟ್ಟುಸಿರು ಬಿಟ್ಟರು.
ಬೆಳಿಗ್ಗೆ 9 ನಂತರ ಹುಣಸೂರು ನಗರದಲ್ಲಿ ಮ್ಯಾಕ್ಸಿಕ್ಯಾಬ್, ಮಿನಿಬಸ್‌ಗಳವರು ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಕರನ್ನು ಹತ್ತಿಸಿಕೊಂಡು ಹೋದರು.
ಸಾರಿಗೆ ಬಸ್‌ಗಳಲ್ಲಿ ಮೈಸೂರಿಗೆ 60 ರೂ. ಇದ್ದ ಬಸ್ ಪ್ರಯಾಣ ದರ 100 ರೂ. ಆಗಿತ್ತು. ಕೆ.ಆರ್.ನಗರ, ಕೋಟೆ ಕಡೆಗೆ ಆಟೋಗಳವರು ದುಬಾರಿ ಹಣ ಪಡೆದು ಕರೆದೊಯ್ಯುತ್ತಿದ್ದುದು ಕಂಡುಬಂದಿತು.





