ಹುಣಸೂರು: ಸಾಲ ಪಾವತಿಸುವಂತೆ ಕಿರುಕುಳ ನೀಡುತ್ತಿದ್ದ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಒತ್ತಡಕ್ಕೆ ಬೇಸತ್ತ ಮಹಿಳೆಯೊಬ್ಬರು ಕ್ರಿಮಿನಾಶಕ ಕಾಳಿನ ಮಾತ್ರೆ ನುಂಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಿರಿಜಾಜಿ ಗ್ರಾಮದಲ್ಲಿ ನಡೆದಿದೆ.
ಸುಶೀಲ(48) ಸಾವನ್ನಪ್ಪಿದ ಮಹಿಳೆ. ಸುಶೀಲ ಅವರು ಹುಣಸೂರಿನ ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದಿದ್ದರು. ಪ್ರತಿ ತಿಂಗಳು ಸಕಾಲದಲ್ಲಿ ಪಾವತಿ ಮಾಡುತ್ತಿದ್ದರು. ಆದರೆ ಈ ವಾರ ಸಾಲ ಪಾವತಿಯು ವಿಳಂಬವಾಗಿದೆ. ಈ ಹಿನ್ನೆಲೆ ಫೈನಾನ್ಸ್ ಸಿಬ್ಬಂದಿ ಮನೆ ಬಳಿ ಬಂದು ಗಲಾಟೆ ನಡೆಸಿದ್ದರು.
ಈ ಕಾರಣ ಮನದೊಂದ ಸುಶೀಲ ಕಾಳಿನ ಕ್ರಿಮಿನಾಶಕ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪುತ್ರ ನವೀನ್ ಪ್ರಕರಣ ದಾಖಲಿಸಿದ್ದಾರೆ.





