ಹುಣಸೂರು: ರಸ್ತೆಯಲ್ಲಿ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಕುಳಿತಿದ್ದ ಕೆಎಸ್‌ಆರ್‌ಪಿ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಶಿರೇನಹಳ್ಳಿ ರಸ್ತೆಯಲ್ಲಿ ನಡೆದಿದೆ.
ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ನಿವಾಸಿ ಸೀಮೆಎಣ್ಣೆ ಕುಳ್ಳಯ್ಯನವರ ಮಗ ಕೆ.ಸಾಗರ್ (೩೧) ಮೃತಪಟ್ಟವರು. ಸ್ನೇಹಿತನ ಮದುವೆಯ ಆರತಕ್ಷತೆಗೆ ಹೋಗಿ ಬರುವಾಗ ರಸ್ತೆಯಲ್ಲಿ ಬಿದ್ದಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸಾಗರ್ ಮೃತಪಟ್ಟಿದ್ದು, ಬೈಕ್ ಓಡಿಸುತ್ತಿದ್ದ ಸ್ನೇಹಿತ ವಾಸು ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾಗರ್ ಬೆಂಗಳೂರಿನ ಕೋರಮಂಗಲದ ಬೆಟಾಲಿಯನ್ ೪ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೋಮವಾರ ಬಿರುಗಾಳಿ ಮಳೆಗೆ ರಸ್ತೆಯಲ್ಲಿ ಬಿದ್ದ ಮರವನ್ನು ತೆರವುಗೊಳಿಸಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯುವಕ ಪ್ರಾಣ ಕಳೆದುಕೊಂಡಿದ್ದು.ಸಂಬಂಧಿಸಿದವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಕಟ್ಟೆಮಳಲವಾಡಿಯ ಶಂಕರ್ ಒತ್ತಾಯಿಸಿದ್ದಾರೆ.





