ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜುಂಡೇಶ್ವರನ ದೇವಾಲಯದಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಆದಾಯದಲ್ಲಿ ಕೊಂಚ ಕುಸಿತ ಕಂಡಿದೆ.
ದೇವಾಲಯದ ದಾಸೋಹ ಭವನದಲ್ಲಿ ನಡೆದ ಎಣಿಕೆ ವೇಳೆ ಒಂದೇ ತಿಂಗಳಲ್ಲಿ ಒಟ್ಟು ₹82,30,313 ನಗದು ಸಂಗ್ರಹವಾಗಿದೆ.
ದೇವಾಲಯದ ಎಲ್ಲಾ ಹುಂಡಿಗಳನ್ನು ದೇವಸ್ಥಾನದ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿಗಳ ಸಮ್ಮುಖದಲ್ಲಿ ತೆರೆಯಲಾಗಿದ್ದು, ಸಂಗ್ರಹವಾದ ಕಾಣಿಕೆ ಮೊತ್ತವನ್ನು ಲೆಕ್ಕ ಹಾಕಲಾಯಿತು. ಈ ವೇಳೆ 19 ಗ್ರಾಂ ಚಿನ್ನ ಮತ್ತು 990 ಗ್ರಾಂ ಬೆಳ್ಳಿ ಸಹ ಸಂಗ್ರಹವಾಗಿದೆ.
ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳೂ ಗಮನ ಸೆಳೆದವು. ಅಮೆರಿಕಾ (1), ಆಸ್ಟ್ರೇಲಿಯಾ (3), ಇಂಗ್ಲೆಂಡ್ ಪೌಂಡ್ (2), ಅರಬ್ ದೇಶ (1), ಭೂತಾನ್ (3), ಮಲೇಶಿಯಾ (1) ಸೇರಿದಂತೆ ಒಟ್ಟು 47 ವಿದೇಶಿ ಕರೆನ್ಸಿಗಳು ಕಾಣಿಕೆಯಾಗಿ ಬಂದಿವೆ. ಇಂಗ್ಲೆಂಡ್ ಕಾಯಿನ್ ಪೌಂಡ್-1 (34) ಹಾಗೂ ಪೌಂಡ್-2 (1) ನಾಣ್ಯಗಳೂ ದೊರೆತಿವೆ. ದೇಶ-ವಿದೇಶಗಳಿಂದ ಭಕ್ತರು ನಂಜುಂಡನಿಗೆ ಕಾಣಿಕೆ ಸಲ್ಲಿಸುತ್ತಿರುವುದು ಈ ಎಣಿಕೆಯಲ್ಲಿ ಸ್ಪಷ್ಟವಾಗಿದೆ.





