ನಂಜನಗೂಡು : ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ಮೂರು ದಿನಗಳಿಂದ ತೀವ್ರ ಪರದಾಡುವಂತಾಗಿದೆ. ಸನಿಹದಲ್ಲೇ ಕಪಿಲಾ ನದಿ ಹರಿಯುತ್ತಿದ್ದರೂ ಗ್ರಾಮದ ಜನರು ಕುಡಿಯುವ ನೀರಿಲ್ಲದೇ ನಿತ್ಯ ನರಕ ಅನುಭವಿಸುತ್ತಿದ್ದಾರೆ.
ಹುಲ್ಲಹಳ್ಳಿ ಗ್ರಾಮದ ಕಪಿಲಾ ನದಿಯಿಂದ ಗುಂಡ್ಲುಪೇಟೆ ತಾಲ್ಲೂಕಿನ 136 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಹುಲ್ಲಹಳ್ಳಿ ಗ್ರಾಮದಲ್ಲಿ ಕಪಿಲಾ ನದಿ ಹರಿಯುತ್ತಿದ್ದರೂ ಜನರು ನೀರಿಲ್ಲದೇ ಪರದಾಡುತ್ತಿದ್ದಾರೆ.
ಗ್ರಾಮದ 6, 7ನೇ ವಾರ್ಡಿನಲ್ಲಿ ಸತತ ಮೂರು ತಿಂಗಳಿಂದ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನ ಇಲ್ಲದಂತಾಗಿದ್ದು, ಜನರ ಸಮಸ್ಯೆಗೆ ಇಲ್ಲಿನ ಆಡಳಿತ ಕ್ಯಾರೇ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.





