ಮೈಸೂರು : ಮೈಸೂರಲ್ಲಿ ಮಧ್ಯಾಹ್ನದ ವೇಳೆಗೆ ಮಳೆ ಶುರುವಾದ ಮಳೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಯಿತು.
ನಗರದೆಲ್ಲೆಡೆ ರಸ್ತೆ ಮೇಲೆ ಸಣ್ಣಸಣ್ಣ ಝರಿಗಳಂತೆ ಹರಿವ ನೀರು, ಹಲವೆಡೆ ರಸ್ತೆ ಮೇಲೆ ಚರಂಡಿ ನೀರು ಧಾರಾಕಾರವಾಗಿ ಹರಿದರೆ, ಅಲ್ಲಲ್ಲಿ ರಸ್ತೆಯ ಗುಂಡಿಗಳಲ್ಲಿ ತುಂಬಿದ್ದ ನೀರು ವಾಹನ ಚಾಲಕರು ಹಾಗೂ ಸವಾರರಿಗೆ ಸಮಸ್ಯೆಯಾಯಿತು.
ಗುರುವಾರ ಮಧ್ಯಾಹ್ನದಿಂದ ಸಂಜೆವರೆಗೆ ಸುರಿದ ಮಳೆಗೆ ತಗ್ಗು ಪ್ರದೇಶಗಳಲ್ಲಿ ನದಿಯೇ ರಭಸವಾಗಿ ಹರಿಯುತ್ತಿದ್ದಂತೆ ಭಾಸವಾಗಿತ್ತು. ನಗರದ ಒಂದು ಭಾಗಕ್ಕೆ ವರುಣ ಸಿಂಚನ ದೊರೆತರೆ ಮತ್ತೊಂದೆಡೆ ಸೂರ್ಯ ಪ್ರಕಾಶಿಸುತ್ತಿದ್ದ. ನಗರದ ಯಾದವಗಿರಿ, ಪಡುವಾರಹಳ್ಳಿ, ಬಂಬೂ ಬಜಾರ್, ಬನ್ನಿಮಂಟಪ, ಕೆ.ಆರ್ ಆಸ್ಪತ್ರೆ, ಅರಸು ರಸ್ತೆ, ದಾಸಪ್ಪ ವೃತ್ತ, ಮಾನಸ ಗಂಗೋತ್ರಿ ಆವರಣ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮದ್ಯಾಹ್ನ 2 ಕ್ಕೆ ಆರಂಭವಾದ ಮಳೆ ಸತತ ಒಂದೂವರೆ ಗಂಟೆಗೂ ಹೆಚ್ಚುಕಾಲ ಸುರಿಯಿತು. ಬಿಟ್ಟುಬಿಡದೇ ಸುರಿದ ಭಾರೀ ಮಳೆಗೆ ರಸ್ತೆ ಮೇಲೆ ನೀರು ತುಂಬಿ ಸಂಚಾರಕ್ಕೆ ಅಡಚಣೆ ಉಂಟಾಯಿತೆ ವಿನಃ ಯಾವುದೇ ಆಸ್ತಿಪಾಸ್ತಿಗೆ ನಷ್ಟವಾಗಿಲ್ಲ.
ಕೆರೆಯಂತಾದ ರಸ್ತೆ
ಭಾರೀ ಮಳೆಗೆ ಶೇಷಾದ್ರಿ ಅಯ್ಯರ್ ರಸ್ತೆ ಭಾಗಶಃ ಕೆರೆಯಂತಾಗಿತ್ತು. ರೈಲ್ವೆ ನಿಲ್ದಾಣ ಹಾಗೂ ಮೈಸೂರು ಮೆಡಿಕಲ್ ಕಾಲೇಜನ್ನು ಬೇರ್ಪಡಿಸುವ ಈ ರಸ್ತೆಯ ಮೇಲೆ ನೀರು ತುಂಬಿ ಬಂದಿತ್ತು. ಪಕ್ಕದಲ್ಲಿದ್ದ ಚರಂಡಿ ನೀರು ರಸ್ತೆ ಮಧ್ಯ ಭಾಗದಲ್ಲಿಯೇ ತುಂಬಿಕೊಂಡಿತು. ದ್ವಿಚಕ್ರ ವಾಹನಗಳು ಸಾಗದ ರೀತಿಯಲ್ಲಿ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿರುವ ದೃಶ್ಯ ಕಂಡುಬಂದಿತು.
ಟ್ರಾಫಿಕ್ ಜಾಮ್
ಯಾದವಗಿರಿಯಿಂದ ಬಂಬೂ ಜಜಾರ್‌ಗೆ ಸಂಪರ್ಕ ಕಲ್ಪಿಸುವ 3ನೇ ಮುಖ್ಯ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ರಸ್ತೆ ಮಧ್ಯೆಯಿರುವ ರೈಲ್ವೆ ಅಂಡರ್ ಬ್ರಿಡ್ಜ್‌ನಲ್ಲಿ ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಭಾರೀ ಮಳೆಯಿಂದ ಆಶ್ರಯ ಪಡೆಯಲು ಬ್ರಿಡ್ಜ್ ಕೆಳಗೆ ಕೆಲವರು ನಿಂತರೆ, ರಸ್ತೆ ಮೇಲೆ ಭಾರೀ ಪ್ರಮಾಣದ ನೀರು ನಿಂತ ಕಾರಣ ವಾಹನಗಳು ನಿಂತಲ್ಲೆ ನಿಂತವು, ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.





