ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಮಧ್ಯಾಹ್ನದ ವೇಳೆಗೆ ಮತ್ತೆ ಶುರುವಾಗಿ ತನ್ನ ಆರ್ಭಟ ತೋರಿಸುತ್ತಿದ್ದಾನೆ.
ಮೈಸೂರು ಜಿಲ್ಲೆ ಸರಗೂರು ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಮಧ್ಯಾಹ್ನದ ವೇಳೆಗೆ ಮಳೆ ಆರಂಭವಾಗಿದ್ದು, ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರೀ ಮಳೆಯಿಂದ ಜಮೀನುಗಳಿಂದ ಮನೆಗೆ ತೆರಳಲು ರೈತರು ತೀವ್ರ ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದ್ದಕ್ಕಿದ್ದಂತೆ ಶುರುವಾದ ಭಾರೀ ಮಳೆಯಿಂದ ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾಗಿದ್ದು, ರಸ್ತೆಗಳಲ್ಲಿ ಮಳೆ ನೀರು ನದಿಯಂತೆ ಹರಿಯಿತು. ಭಾರೀ ಮಳೆಯಿಂದ ಮಕ್ಕಳು ಶಾಲೆಯಿಂದ ಮನೆಗೆ ಹೋಗಲು ತೀವ್ರ ಪರದಾಟ ನಡೆಸಿದರು.
ಒಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ ಈಗ ಮತ್ತೆ ಎಡಬಿಡದೇ ಸುರಿಯುತ್ತಿದ್ದು, ಕೆರೆ ಕಟ್ಟೆಗಳೆಲ್ಲಾ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಅನ್ನದಾತರ ಮೊಗದಲ್ಲಿ ಮಂದಹಾಸ ಮನೆಮಾಡಿದೆ.
ಸರಗೂರು ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಜಲಾಶಯಗಳು ಕೂಡ ಭರ್ತಿಯತ್ತ ಸಾಗುತ್ತಿದ್ದು, ರೈತರಲ್ಲಿ ಮಳೆರಾಯ ತುಸು ನೆಮ್ಮದಿ ತಂದಿದ್ದಾನೆ.