ಹೆಚ್.ಡಿ.ಕೋಟೆ: ಕೇರಳದ ವಯನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡು ಬಂದಿದೆ.
ಮರೆಯಾಗಿದ್ದ ಮುಂಗಾರು ಮಳೆ ಕರ್ನಾಟಕದಲ್ಲಿ ಮತ್ತೆ ಆರ್ಭಟಿಸಲು ಸಜ್ಜಾಗಿದೆ. ಈಗಾಗಲೇ ಕೇರಳ ಭಾಗದಲ್ಲಿ ಅತ್ಯಧಿಕ ಮಳೆ ಬರುತ್ತಿದ್ದು, ಕಬಿನಿ ಜಲಾಶಯದ ಒಳಹರಿವಿನಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.
ಕಪಿನಾ ನದಿಯು ನೆರೆಯ ರಾಜ್ಯ ಕೇರಳದಲ್ಲಿ ಹುಟ್ಟಿ ಅರಣ್ಯ ಪ್ರದೇಶ, ಕಣಿವೆ ಭಾಗದ ಮೂಲಕ ಹರಿದು ಬರಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ಕಬಿನಿ ಜಲಾಶಯ ಕಟ್ಟಲಾಗಿದೆ. ಭಾರೀ ಮಳೆಯಿಂದಾಗಿ ಇಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗುತ್ತಿದೆ. ಇಂದು ಜಲಾಶಯದ ಒಳಹರಿನಲ್ಲಿ ದಿಢೀರ್ ಏರಿಕೆಯಾಗಿದೆ.
ಇಂದು ಬರೋಬ್ಬರಿ ಜಲಾಶಯದ ಒಳಹರಿವು 5560 ಕ್ಯೂಸೆಕ್ಸ್‌ಗಳಿಗೆ ಏರಿಕೆಯಾಗಿದೆ. 84 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ
ಇಂದಿನ ನೀರಿನ ಮಟ್ಟ 77 ಅಡಿಗಳಿಗೆ ಏರಿಕೆಯಾಗಿದೆ. ಇನ್ನೂ ಒಳಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೊರಹರಿವನ್ನು 1000 ಕ್ಯೂಸೆಕ್ಸ್‌ಗಳಿಗೆ ಏರಿಕೆ ಮಾಡಲಾಗಿದೆ.
ಮಳೆ ಮುಂದುವರಿದರೆ ಕಪಿಲಾ ನದಿ ವ್ಯಾಪ್ತಿಯಲ್ಲಿ ನೀರಿನ ಸಂಗ್ರಹಣೆ ಹಾಗೂ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಊಹಿಸಲಾಗಿದ್ದು, ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದ ಇರುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.





