ಹೆಚ್.ಡಿ.ಕೋಟೆ: ನೆರೆಯ ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಕಬಿನಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದೆ.
ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದ ನೀರಿನ ಮಟ್ಟ ಹೆಚ್ಚಾಗಿದ್ದು, ಇದೀಗ ಜಲಾಶಯ ಸಂಪೂರ್ಣ ಭರ್ತಿಯಾಗಲು ಕೇವಲ 5 ಅಡಿಗಳಷ್ಟು ಮಾತ್ರ ಬಾಕಿಯಿದೆ. ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಸಂತಸ ಮನೆಮಾಡಿದೆ.
ಪ್ರಸ್ತುತ ಜಲಾಶಯದ ನೀರಿನ ಮಟ್ಟ 79.54 ಅಡಿಗಳಿದ್ದು, ಪೂರ್ಣ ಜಲಾಶಯದ ಮಟ್ಟ 84 ಅಡಿಗಳಾಗಿದೆ. ಮುಂದಿನ ವಾರ ಜಲಾಶಯ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಗಳಿವೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನೂ ಕೇರಳ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಮುಂಗಾರು ಸಕ್ರಿಯವಾಗಿದ್ದು, ಇದರ ಪರಿಣಾಮ ಕಬಿನಿ ಜಲಾಶಯದ ನೀರಿನ ಮಟ್ಟ ನಿರಂತರ ಹೆಚ್ಚಳವಾಗುತ್ತಿದೆ. ಕಬಿನಿ ರೈತರ ಜೀವನಾಡಿಯಾಗಿದ್ದು, ಜಲಾಶಯ ಭರ್ತಿಯಾಗುತ್ತಿರುವುದು ರೈತರಿಗೆ ಸಂತಸ ತಂದಿದೆ.