ಹುಣಸೂರು: ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ತಂಬಾಕು ಬೆಳೆ ಧಾರಾಕಾರ ಮಳೆಯಿಂದ ಸಂಪೂರ್ಣ ನೆಲಕಚ್ಚಿದೆ
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ಬೆಳೆದಿರುವ ತಂಬಾಕು ಫಸಲು ಮಳೆ ನೀರಿನಿಂದ ಮುಳುಗಿ ಕೊಳೆಯುವ ಹಂತಕ್ಕೆ ಬಂದಿದ್ದು, ಹಲವು ಕಡೆ ಹಳದಿ ಬಣ್ಣಕ್ಕೆ ತಿರುಗಿ ಕಟಾವು ಮಾಡದೇ ಜಮೀನುಗಳಲ್ಲೇ ಬಿಡಲಾಗಿದೆ.
ತಂಬಾಕು ಬೆಳೆಗಾರರು ಸಸಿ ನಾಟಿ ಸಮಯದಲ್ಲಿ ಸಕಾಲಕ್ಕೆ ಮಳೆ ಇಲ್ಲದೇ ನಷ್ಟ ಅನುಭವಿಸಿದ್ದು ಒಂದೆಡೆಯಾದರೆ, ಕಟಾವು ಸಮಯದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಬೆಳೆದ ಸ್ವಲ್ಪ ತಂಬಾಕು ಕೊಳೆತು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದು, ಆದಷ್ಟು ಬೇಗ ರೈತರ ಸಮಸ್ಯೆಗೆ ಸ್ಪಂದಿಸಿ ಎಂದು ಒತ್ತಾಯಿಸಿದ್ದಾರೆ.
ಇನ್ನೂ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ 650 ಹೆಕ್ಟೇರ್ ತಂಬಾಕು ಹಾನಿಗೊಂಡಿದ್ದು, ಈ ಬಗ್ಗೆ ಕೃಷಿ ಇಲಾಖೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಶೂನ್ಯ ಬಡ್ಡಿದರದಲ್ಲಿ 25 ಸಾವಿರ ಸಾಲ ನೀಡುವ ಬಗ್ಗೆ ತಂಬಾಕು ಮಂಡಳಿ ಕ್ರಮ ವಹಿಸಿದೆ ಎನ್ನಲಾಗಿದೆ.