ಮೈಸೂರು : ನಗರದಲ್ಲಿ ಬುಧವಾರ ಮಧ್ಯಾಹ್ನ ಮಳೆ ಧಿಢೀರ್ ಬಂದ ಕಾರಣ ಜನ ಜೀವನ ಅಸ್ತವ್ಯಸ್ತವಾಗಿತ್ತು.
ನಗರದ ಹಲವೆಡೆ ಭಾರೀ ಮಳೆಗೆ ರಸ್ತೆಯಲ್ಲೇ ಮಳೆ ನೀರು ನಿಂತು ವಾಹನ ಸವಾರರು ಪರಾದಾಡಿದರು.
ಮಾರ್ಕೆಟ್‌ಗೆ ಬಂದವರ ಪರದಾಟ ;
ದೇವರಾಜ ಮಾರುಕಟ್ಟೆಗೆ ಬಂದ ಸಾರ್ವಜನಿಕರು ಪರದಾಡಿದರು, ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಹೂವು, ಹಣ್ಣು ವ್ಯಾಪಾರಸ್ಥರು ಕಷ್ಟಕ್ಕೀಡಾಗಿದ್ದು, ಮಳೆಯಿಂದಾಗಿ ವ್ಯಾಪಾರವಿಲ್ಲದೇ ದಿಕ್ಕು ತೋಚದಂತಾಗಿದ್ದಾರೆ.
ಟ್ರಾಫಿಕ್ ಜಾಮ್ ;
ಮಳೆಯ ಪರಿಣಾಮ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವವರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಾಕಷ್ಟು ಪರದಾಟ ನಡೆಸಿದರು. ಕೆ.ಆರ್.ವೃತ್ತ, ಸಯ್ಯಾಜಿ ರಾವ್ ರಸ್ತೆ, ಅಗ್ರಹಾರ ವೃತ್ತ, ಸಿದ್ದಪ್ಪ ವೃತ್ತ, ಆರ್‌ಟಿಓ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ರಸ್ತೆಯಲ್ಲೇ ಮಳೆ ನೀರು ನಿಂತು ವಾಹನ ಸವಾರರು ಸಂಚರಿಸಲು ಸಾಧ್ಯವಾಗದೇ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಇನ್ನೂ ಕೆಲವು ಕಡೆ ಚರಂಡಿ ನೀರು ಹಾಗೂ ಮಳೆ ನೀರು ಸೇರಿ ರಸ್ತೆಯ ಮೇಲೆಯೇ ಹರಿಯುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಸಾಧಾರಣ ಮಳೆ ;
ನಗರದ ವಿವಿಧ ಬಡಾವಣೆಗಳಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಸುರಿದರೆ ಕೆಲವೆಡೆ ತುಸು ಹೆಚ್ಚಾಗಿಯೇ ಸುರಿಯಿತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಯಂತೆ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಜೂ.11ರಿಂದ 15ರವರೆಗೆ ಮೋಡ ಕವಿದ ವಾತಾವರಣ ದೊಂದಿಗೆ ತುಂತುರುವಿನಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.





