ಮೈಸೂರು: ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಮಿತಿ ಮೀರಿದ್ದು. ಇದೀಗ ಆರೋಗ್ಯ ಇಲಾಖೆ ಅಧಿಕಾರಿಯೇ ಬಲಿಯಾಗಿದ್ದಾರೆ. ಹುಣಸೂರು ತಾಲ್ಲೂಕಿನ ಸಮುದಾಯ ಆರೋಗ್ಯಾಧಿಕಾರಿ ಡೆಂಗ್ಯೂವಿನಿಂದ ಮೃತಪಟ್ಟಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಸಮುದಾಯ ಆರೋಗ್ಯಾಧಿಕಾರಿಯೊಬ್ಬರು ಡೆಂಗ್ಯೂಗೆ ಬಲಿಯಾಗಿದ್ದಾರೆ. 35 ವರ್ಷದ ನಾಗೇಂದ್ರ ಮೃತ ಆರೋಗ್ಯಾಧಿಕಾರಿಯಾಗಿದ್ದಾರೆ. ಜಿಲ್ಲೆಯಲ್ಲಿ ಡೆಂಗ್ಯೂಗೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ. ಇವರು ಹುಣಸೂರು ತಾಲ್ಲೂಕಿನ ಗುರುಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹುಣಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮುದಾಯ ಆರೋಗ್ಯಾಧಿಕಾರಿ ನಾಗೇಂದ್ರ ಕಳೆದ ಸೋಮವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ಡೆಂಗ್ಯೂವಿನಿಂದ ಸಾವು ದಾಖಲಾದ ಹಿನ್ನೆಲೆಯಲ್ಲಿ ಜನತೆಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಮನೆಯ ಸುತ್ತ ಮುತ್ತ ಮಳೆ ನೀರು ನಿಲ್ಲದಂತೆ ಸ್ವಚ್ಛತೆ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.





