ಮೈಸೂರು: ಮಹಿಳೆಯರು ಕಾಂಗ್ರೆಸ್ ಗ್ಯಾರೆಂಟಿಗಳಿಂದ ದಾರಿ ತಪ್ಪುತ್ತಿದ್ದಾರೆ ಎಂದು ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆ ಮೈಸೂರಿನಲ್ಲಿಂದು (ಏ.೧೫) ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಕಿಡಿಕಾರಿದ್ದಾರೆ.
ಗ್ಯಾರೆಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಮಹಿಳೆಯರು ಯಾವ ರೀತಿ ದಾರಿ ತಪ್ಪಿದ್ದಾರೆ ಎಂದು ಹೇಳಬೇಕು. ಎರಡು ಬಾರಿ ಸಿಎಂ ಆಗಿದ್ದವರು ಈ ರೀತಿ ದಾರಿ ತಪ್ಪಿಸುವ ಹೇಳಿಕೆ ನೀಡುವುದು ಸರಿಯಲ್ಲ. ಮನೆಗೆಲಸದ ಹೆಣ್ಮಕ್ಕಳಿಗೆ ಯಾವುದೇ ಭದ್ರತೆ ಇಲ್ಲ. ಇಂತಹ ಹೆಣ್ಮಕ್ಕಳಿಗೆ 2ಸಾವಿರ ರೂ ಕೊಡುವ ಕಾರ್ಯಕ್ರಮ ಗೃಹಲಕ್ಷ್ಮಿ ಯೋಜನೆ. ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವ ಹಕ್ಕನ್ನ ಕುಮಾರಸ್ವಾಮಿಗೆ ಕೊಟ್ಟಿದ್ದು ಯಾರು ಎಂದು ವಾಗ್ದಾಳಿ ನಡೆಸಿದರು.
ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುವುದೇ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. 12 ನೆ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ಸಮಾನತೆ ನೀಡಲಿಕ್ಕೆ ಮುಂದಾದರು. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಇತ್ತೀಚಿನ ದಿನಗಳಲ್ಲಿ ದಾರಿ ತಪ್ಪಿದ ಮಗ ಆಗಿದ್ದಾರೆ. ನೆನ್ನೆ ಮಂಡ್ಯದಲ್ಲಿ ಗೋ ಬ್ಯಾಕ್ ಕುಮಾರಸ್ವಾಮಿ ಎಂದು ಪ್ರೊಟೆಸ್ಟ್ ನಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ಹೊರ ಹಾಕಿದರು.