ಮೈಸೂರು: ಸಮ್ಮಿಶ್ರ ಸರ್ಕಾರದ ಪತನದ ನಂತರ ಹಲವು ಸಂಘರ್ಷಗಳಿಗೆ ಎಡೆಮಾಡಿಕೊಟ್ಟಿದ್ದು, ಈವೆಲ್ಲಕ್ಕೂ ಈಗ ತೆರೆ ಬಿದ್ದಿದೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಎಂಎಲ್‌ಸಿ ಎಚ್. ವಿಶ್ವನಾಥ್ ಅವರು ಮತ್ತೆ ಒಂದಾಗಿದ್ದಾರೆ.
ಜಿಲ್ಲೆಯ ಕೆ.ಆರ್ ನಗರದಲ್ಲಿರುವ ಎಚ್. ವಿಶ್ವನಾಥ್ ಅವರ ಮನೆಗೆ ಇಂದು (ಏ.೬) ಭೇಟಿ ನೀಡಿದ ಎಚ್.ಡಿ ಕುಮಾರಸ್ವಾಮಿ ಮುನಿಸು ಮರೆತು ಮುಖಾಮುಖಿಯಾಗಿದ್ದು, ಆತ್ಮೀಯತೆಯ ಮಾತುಕತೆ ನಡೆಸಿದ್ದಾರೆ. ನಂತರ ಎಚ್‌ಡಿಕೆ, ವಿಶ್ವನಾಥ್ ಅವರ ಗುಣಗಾನ ಮಾಡಿದ್ದಾರೆ.
ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‌ಡಿಕೆ, ರಾಜಕೀಯ ಎಂದಮೇಲೆ ಟೀಕೆ ಟಿಪ್ಪಣಿಗಳು ಸಹಜವಾಗಿಯೇ ಇರುತ್ತದೆ. ನಾನು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ತಿಳಿಯುತ್ತಿದ್ದಂತೆ ಕರೆ ಮಾಡಿ ಶುಭ ಕೋರಿದ್ದಾರೆ. ಎಲ್ಲ ಮನಸ್ಥಾಪಗಳನ್ನು ಮರೆತು ವಿಶ್ವಣ್ಣ ನಮಗೆ ಬೆಂಬಲ ಕೊಟ್ಟಿದ್ದಾರೆ ಎಂದರು.
ವಿಶ್ವಣ್ಣ ಅವರ ಅಭಿಮಾನಕ್ಕೆ ಸೋತು ನಾನು ಅವರ ಮನೆಗೆ ಬಂದಿದ್ದೇನೆ. ಅವರು ನೇರವಾಗಿ, ನಿಷ್ಠೂರವಾಗಿ ಮಾತನಾಡುವ ರಾಜಕಾರಣಿಯಾಗಿರುವ ಅವರು ಪ್ರಾಮಾಣಿಕರಾಗಿದ್ದಾರೆ. ಅವರ ಬೆಂಬಲಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ತಮ್ಮ ಆತ್ಮೀಯತೆಯನ್ನು ಮತ್ತೊಮ್ಮೆ ತೋರಿಸಿದ್ದಾರೆ.