ಎಚ್.ಡಿ.ಕೋಟೆ: ಪತ್ನಿಯ ನಡವಳಿಕೆಯಿಂದ ಬೇಸತ್ತ ಪತಿ ಪತ್ನಿಯನ್ನೇ ಕತ್ತು ಕೊಯ್ದು ಕೊಲೆ ಮಾಡಿ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕಣಿಯನಹುಂಡಿ ಗ್ರಾಮದ ತೇಜಸ್ವಿನಿ (25) ಗಂಡನಿಂದ ಕೊಲೆಯಾದ ಮಹಿಳೆ. ಗ್ರಾಮದ ರೈತ ದೇವರಾಜ ಕೊಲೆಗೈದ ಆರೋಪಿ.
7 ವರ್ಷಗಳ ಹಿಂದೆ ತನ್ನ ಅಕ್ಕನ ಮಗಳಾದ ಕುಟ್ಟವಾಡಿ ಬಸವಾಳ ಗ್ರಾಮದ ವಾಸಿ ತೇಜಸ್ವಿನಿಯನ್ನು ದೇವರಾಜ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಒಂದೂವರೆ ತಿಂಗಳ ಹಿಂದೆ ತೇಜಸ್ವಿನಿ ತಮ್ಮ ಸ್ವಂತ ಊರಿನ ದರ್ಶನ್ ಗೌಡ ಎಂಬವರ ಜೊತೆ ಓಡಿ ಹೋಗಿದ್ದರು. ನಂತರ ಪೊಲೀಸ್ ಠಾಣೆಗೆ ದೂರು ನೀಡಿ ತೇಜಸ್ವಿನಿಯನ್ನು 2 ದಿನಗಳ ನಂತರ ಬೆಂಗಳೂರಿನಿಂದ ಕರೆತಂದು, ಸ್ವಲ್ಪ ದಿನ ತವರು ಮನೆಗೆ ಬಿಟ್ಟಿದ್ದರು.
ಮಂಗಳವಾರ ಗಂಡನ ಮನೆಗೆ ಹೋಗುತ್ತೇನೆ ಎಂದು ಕೋಟೆ ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದು, ದೇವರಾಜರ ಜೊತೆಗೆ ಕಣಿಯನ ಹುಂಡಿ ಗ್ರಾಮದ ತೋಟದ ಮನೆಗೆ ಕಳಿಸಲಾಗಿತ್ತು. ಪತ್ನಿಯ ನಡವಳಿಕೆಯಿಂದ ಬೇಸತ್ತ ದೇವರಾಜ ಮನೆಯಲ್ಲಿ ಮಧ್ಯಾಹ್ನ 12 ಗಂಟೆ ಸಂದರ್ಭದಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಮನೆ ಹಿಂಭಾಗ ಕರೆದೊಯ್ದು, ಆಕೆಯ ಕತ್ತನ್ನು ಕೊಯ್ದು ಸಾಯಿಸಿ, ನಂತರ ಹಂಪಾಪುರ ಉಪ ಪೊಲೀಸ್ ಠಾಣೆಯ ಪೇದೆ ಸುರೇಶ ಅವರಿಗೆ ನಡೆದ ವಿಚಾರದ ಬಗ್ಗೆ ದೂರವಾಣಿ ಮುಖಾಂತರ ತಿಳಿಸಿದ್ದಾರೆ. ಅವರು ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯ ಎಸ್‌ಐ ಸುರೇಶ್ ನಾಯಕ್, ಮಾದೇವಸ್ವಾಮಿ ಹಂಪಾಪುರ ಪೊಲೀಸ್ ಠಾಣೆಗೆ ಹೋಗಿ ಆರೋಪಿ ದೇವರಾಜ ಅವರನ್ನು ಕೋಟೆ ಪೊಲೀಸ್ ಠಾಣೆಗೆ ಕರೆತಂದು ಬಂಧಿಸಿದ್ದಾರೆ.
ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಶಬೀರ್ ಹುಸೇನ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್‌ಪಿ ವಿಷ್ಣುವರ್ಧನ್, ಡಿವೈಎಸ್ಪಿ ಗೋಪಾಲಕೃಷ್ಣ, ಮತ್ತಿತರರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.