Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಹಾಸನ ಪೆನ್‌ಡ್ರೈವ್‌ ಪ್ರಕರಣ; ಸಂತ್ರಸ್ತೆಯರಲ್ಲಿ ಶೇ.80 ರಷ್ಟು ಒಕ್ಕಲಿಗರು: ಎಂ.ಲಕ್ಷ್ಮಣ್‌

ಮೈಸೂರು: ಹಾಸನ ಪೆನ್‌ಡ್ರೈವ್‌ ಪ್ರಕರಣದ ಸಂತ್ರಸ್ತೆಯರಲ್ಲಿ ಶೇ.80 ರಷ್ಟು ಮಹಿಳೆಯರು ಒಕ್ಕಲಿಗರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್‌ ಹೇಳಿದ್ದಾರೆ.

ಮೈಸೂರು ನಗರ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೊದಲು ದೇವರಾಜೇಗೌಡರನ್ನು ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಅವರ ಲೈಂಗಿಕ ಹಗರಣ ಕುರಿತು ತನಿಖೆ ನಡೆಸಬೇಕಾ ಅಥವಾ ಬೇಡವೇ ಎನ್ನುವುದನ್ನು ಜಾ.ದಳ- ಬಿಜೆಪಿ ನಾಯಕರು ಸಾರ್ವಜನಿಕವಾಗಿ ಹೇಳಲಿ ಎಂದು ಸವಾಲು ಹಾಕಿದ ಲಕ್ಷ್ಮಣ್‌, ವಿಡಿಯೋ ಮಾಡಿದ್ದು ಪ್ರಜ್ವಲ್‌, ವಿಡಿಯೋ ತೆಗೆದುಕೊಂಡಿದ್ದು ಕಾರ್ತಿಕ್, ಊರವರಿಗೆ ಹಂಚಿದ್ದು ದೇವರಾಜೇಗೌಡ. ಇದರಲ್ಲಿ ಸಿಎಂ ಹಾಗೂ ಡಿಸಿಎಂ ಅವರ ಪಾತ್ರ ಏನು ಇಲ್ಲ. ಆದರೂ ಸಿಎಂ ಹಾಗೂ ಡಿಸಿಎಂ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲೂ ಕೂಡ ಬಿಜೆಪಿ-ಜೆಡಿಎಸ್ ರಾಜಕೀಯವಾಗಿ ಬಳಸುವ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.

ಒಕ್ಕಲಿಗ ನಾಯಕರಾಗಿ ಬೆಳೆಯುತ್ತಿರುವ ಡಿಕೆ ಶಿವಕುಮಾರ್‌ ಅವರನ್ನು ತುಳಿಯಲು ಸುಳ್ಳು ಸುದ್ದಿ ಹಬ್ಬಿಸಿ ಪ್ರಕರಣದ ದಾರಿ ತಪ್ಪಿಸಲಾಗುತ್ತಿದೆ. ಇದರಲ್ಲಿ ಡಿಕೆಶಿ ಪಾತ್ರವಿಲ್ಲ. ಈಗಾತಾನೇ ಎಸ್‌ಐಟಿ ತನಿಖೆ ಆರಂಭಿಸಿದೆ. ಆರಂಭದಲ್ಲೇ ಸರಿಯಿಲ್ಲ ಎಂದು ಹೇಳುವ ಮೂಲಕ ಮೈತ್ರಿ ನಾಯಕರು ಪ್ರಕರಣದ ದಿಕ್ಕು ತಪ್ಪುಸುತ್ತಿದ್ದಾರೆ ಎಂದು ದೂರಿದರು.

ಎಚ್.ಡಿ. ಕುಮಾರಸ್ವಾಮಿ ಅವರಿಗೆ ಎಸ್‌ಐಟಿ ಮೇಲೆ ನಂಬಿಕೆ ಇಲ್ಲದಿದ್ದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ತಮ್ಮ ಮೈತ್ರಿ ಪಕ್ಷದವರನ್ನು ಒತ್ತಾಯಿಸಲಿ. ಪ್ರಜ್ವಲ್‌ ಕೆಲವೇ ನಿಮಿಷದಲ್ಲಿ ರಾಜತಾಂತ್ರಿಕ ಪಾಸ್‌ ಕೊಟ್ಟು ವಿದೇಶಕ್ಕೇ ಹೋಗಲು ದಾರಿಮಾಡಿಕೊಟ್ಟವರು ಯಾರು? ಈ ಪ್ರಕರಣದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಡಬಲ್ ಸ್ಟ್ಯಾಂಟ್ ತೆಗೆದುಕೊಳ್ಳುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾಗೆ ಪ್ರಜ್ವಲ್ ಹುಡುಕುವುದು ಕಷ್ಟವೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಪ್ರಧಾನ ಕಾರ್ಯದರ್ಶಿಗಳಾದ ಎಂ. ಶಿವಣ್ಣ, ಭಾಸ್ಕರ್ ಎಲ್.ಗೌಡ, ರಘು, ಗಿರೀಶ್, ರಘು ಗೌಡ, ರಾಮಚಂದ್ರ,‌ ವಕ್ತಾರ ಕೆ. ಮಹೇಶ ಹಾಜರಿದ್ದರು.

Tags: