ಮೈಸೂರು: ನಗರದ ಜೆ.ಕೆ. ಟೈರ್ಸ್ ಆಡಳಿತ ವರ್ಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಕಾರ್ಮಿಕ ನ್ಯಾಯಾಲಯದ ತೀರ್ಪನ್ನು ಕಡೆಗಣಿಸಿ, ಬದಲಿ ಕಾರ್ಮಿಕರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದೆ ಎಂದು ಜೆ.ಕೆ. ಟೈರ್ಸ್ ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಇಂದಿರೇಶ್ ಆರೋಪಿಸಿದರು.
ಕಾರ್ಖಾನೆಯ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಸುಮಾರು 5 ವರ್ಷ ಹೋರಾಟ ಮಾಡಿ ಯಶ ಗಳಿಸಿದ ಮೇಲೂ ನ್ಯಾಯಾಲಯದ ಆದೇಶದಂತೆ ಮತ್ತೆ ನಿಯುಕ್ತಿರಾಗಿರುವ ಬದಲಿ ಕೆಲಸಗಾರರನ್ನು ಇನ್ನಿಲ್ಲದಂತೆ ಶೋಷಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.
ಕಾರ್ಮಿಕ ಸಂಘಟನೆ ರಚಿಸಿದ ಒಂದೇ ಕಾರಣಕ್ಕೆ ಸಮಾಲೋಚನೆ ಹೆಸರಿನಲ್ಲಿ ಬದಲಿ ಕಾರ್ಮಿಕರನ್ನು ಕೆಲಸದಿಂದ ತೆಗೆದಿದ್ದರು. ಜೆ.ಕೆ.ಟೈರ್ಸ್ ಈ ಕ್ರಮ ಕಾರ್ಮಿಕ ನ್ಯಾಯಾಲಯ ಕಾನೂನು ಬಾಹಿರ ಎಂದು ತಿಳಿಸಿದ ನಂತರ ಮತ್ತೆ ಕೆಲಸಕ್ಕೆ ಬದಲಿ ಕಾರ್ಮಿಕರನ್ನು ನಿಯುಕ್ತಿಗೊಳಿಸಲಾಗಿತ್ತು.
ಇಂತಹ ಬದಲಿ ಕಾರ್ಮಿಕರಿಗೆ ಅವರ ದೈಹಿಕ ಸಾಮರ್ಥ್ಯ ಮೀರಿದ ಕೆಲಸಕ್ಕೆ ಹಾಕಲಾಗುತ್ತಿದೆ. 50 ವರ್ಷ ಮೇಲ್ಪಟ್ಟವರಿಗೂ ಸುಮಾರು 50 ರಿಂದ 60 ಕೆಜಿ ತೂಕದ ಟೈರ್‌ಗಳನ್ನು ನಾಲ್ಕು ಅಡಿಗೂ ಹೆಚ್ಚು ಎತ್ತರದವರೆಗೆ ಎತ್ತುವಂತಹ ಕೆಲಸ ನೀಡಲಾಗುತ್ತಿದೆ. ಇದು ಈ ಬದಲಿ ಕಾರ್ಮಿಕರು ತಾವಾಗಿಯೇ ಕೆಲಸ ಬಿಟ್ಟು ಹೋಗಲೆಂದು ಮಾಡುವ ಹುನ್ನಾರ ಎಂದು ಆರೋಪಿಸಿದರು.
ಹೀಗಾಗಿ ಕಾರ್ಖಾನೆಯ ಆಡಳಿತ ವರ್ಗ ಅನುಸರಿಸುತ್ತಿರುವ ಈ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಕಾರ್ಮಿಕ ಇಲಾಖೆ, ಕಾರ್ಮಿಕ ನ್ಯಾಯಾಲಯ ಮತ್ತು ಮಾನವ ಹಕ್ಕು ಆಯೋಗ ಮಧ್ಯ ಪ್ರವೇಶಿಸಿ ಬದಲಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಇಂದಿರೇಶ್ ಆಗ್ರಹಿಸಿದರು.
ರಾಜ್ಯ ಬಿಎಂಎಸ್ ಕಾರ್ಯದರ್ಶಿ ವಾಸುದೇವ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.





