ಮೈಸೂರು : ನಗರ ಮತ್ತು ಹೊರ ವಲಯದ ಬಡಾವಣೆಗಳು, ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಒದಗಿಸುವ ಹಳೇ ಉಂಡುವಾಡಿ ಯೋಜನೆ ಕಾಮಗಾರಿ ಆರು ತಿಂಗಳಲ್ಲಿ ಮುಗಿಯಲಿದ್ದು, ಅಲ್ಲಿಯವರೆಗೆ ಕಾವೇರಿ, ಕಬಿನಿ ಜಲಮೂಲದಿಂದ ಒದಗಿಸುತ್ತಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರಪಾಲಿಕೆ ವಲಯ ಕಚೇರಿ 3ರಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಪಾಲಿಕೆ ವಲಯ ಕಚೇರಿ, ಪಟ್ಟಣ ಪಂಚಾಯಿತಿ, ನಗರಸಭೆ ಅಧಿಕಾರಿಗಳ ಸಭೆಯಲ್ಲಿ ಮುಂದಿನ 6 ತಿಂಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾಗಿರುವ ಕಾರಣ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಆಸೀಫ್ ಇಕ್ಬಾಲ್ ಖಲೀಲ್ ಮಾತನಾಡಿ, ೨೦೧೮ರಲ್ಲಿ ಹಳೇ ಉಂಡುವಾಡಿ ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಮೂರು ವರ್ಷಗಳಿಂದ ಕಾಮಗಾರಿ ಆರಂಭವಾಗಿ ಪ್ರಗತಿಯಲ್ಲಿದೆ. 31 ಓವರ್‌ಹೆಡ್ ಟ್ಯಾಂಕ್‌ಗಳಲ್ಲಿ 22 ಪೂರ್ಣವಾಗಿ, 7 ಟ್ಯಾಂಕ್ ಏಪ್ರಿಲ್ ತಿಂಗಳಲ್ಲಿ ಮುಗಿಯಲಿದೆ. ಉಳಿದ 7 ಜೂನ್ ತಿಂಗಳಲ್ಲಿ ಮುಗಿಯಲಿದೆ. ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು.
ಬೆಳಗೊಳ 1ನೇ ಹಂತದಲ್ಲಿ 2.27 ಎಂಎಲ್‌ಡಿ, 2ನೇ ಹಂತದ 13..62, 3ನೇ ಹಂತದಲ್ಲಿ 36.32೨ ಎಂಎಲ್‌ಡಿ, ಹೊಂಗಳ್ಳಿ 2ನೇ ಹಂತ 54, 3ನೇ ಹಂತದ 48 ಎಂಎಲ್‌ಡಿ, ಮೇಳಾಪುರ 1ನೇ ಹಂತ 50 ಎಂಎಲ್‌ಡಿ, ಕಬಿನಿ ಜಲಾಶಯದಿಂದ 60 ಎಂಎಲ್‌ಡಿ ನೀರು ಡ್ರಾ ಮಾಡಲಾಗುತ್ತಿದೆ. ಹಳೇ ಉಂಡುವಾಡಿ ಯೋಜನೆ ಪೂರ್ಣವಾಗುವವರೆಗೆ ಮೇಳಾಪುರ, ಹೊಂಗಳ್ಳಿ ಮೂಲದಿಂದ ರಮ್ಮನಹಳ್ಳಿ ಭಾಗಕ್ಕೆ, ಕಬಿನಿ ಮೂಲದಿಂದ ಶ್ರೀರಾಂಪುರ, ಬೋಗಾದಿ ಭಾಗಕ್ಕೆ ಹರಿಸಲಾಗುತ್ತಿದೆ. ಕಬಿನಿ 2ನೇ ಹಂತದ 60 ಎಂಎಲ್‌ಡಿ ನೀರಿನಲ್ಲಿ ವಿಜಯನಗರ 4ನೇ ಹಂತ, ಎಸ್‌ಬಿಎಂ ಲೇಔಟ್, ರೂಪಾನಗರ ಇನ್ನಿತರೆ ಪ್ರದೇಶಗಳಿಗೆ ಹರಿಸಲಾಗುತ್ತದೆ ಎಂದರು
.
ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಹಾಲಿ ಬಡಾವಣೆಗಳು, ಗ್ರಾಮಗಳಿಗೆ ನೀರು ಕೊಡುವ ಜತೆಗೆ ಖಾಸಗಿ ಬಡಾವಣೆಗಳಿಗೆ ನೀರು ಕೊಡಬೇಕು. ಬಡಾವಣೆಗಳಲ್ಲಿ ನಿರ್ಮಿಸಿರುವ ಓವರ್‌ಹೆಡ್ ಟ್ಯಾಂಕ್‌ಗೆ ಸಂಪರ್ಕ ಕೊಡಬೇಕು. ಎಲ್ಲೆಲ್ಲಿ ಪೈಪ್‌ಲೈನ್ ಅಗತ್ಯವಿದೆ, ಯಾವ್ಯಾವ ಕಡೆಗಳಲ್ಲಿ ಸಂಪರ್ಕ ಕೊಡಬೇಕು, ಎಲ್ಲಿ ಮಿಸ್ಸಿಂಗ್ ಲಿಂಕ್ ಇದೆ ಎನ್ನುವುದನ್ನು ಪರಿಶೀಲಿಸಬೇಕು. ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳು,ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಜಂಟಿ ಸರ್ವೆ ಮಾಡಿ ವರದಿ ತಯಾರಿಸಬೇಕು. ಖಾಸಗಿ ಬಡಾವಣೆಗಳಿಗೆ ನೀರು ಕೊಡಲು ಪೈಪ್‌ಲೈನ್ ಅಗತ್ಯವಿದ್ದರೆ ತಕ್ಷಣವೇ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚಿಸಿದರು.
ರಮ್ಮನಹಳ್ಳಿ ಪಪಂ ವ್ಯಾಪ್ತಿಯಲ್ಲಿ ಜಂಟಿ ಸರ್ವೆ ನಡೆಸಿ ಮ್ಯಾಪ್ ಮಾಡಿ ಎಲ್ಲೆಲ್ಲಿ ಏನಾಗಬೇಕೆಂದು ಗುರುತಿಸಲಾಗಿದೆ. ವಸಂತನಗರ, ಪೊಲೀಸ್ ಬಡಾವಣೆ,ಸಾತಗಳ್ಳಿ ಬಡಾವಣೆಗಳಿಗೆ ನೀರು ಹೋಗಲು ಇರುವ ಸಮಸ್ಯೆ ನಿವಾರಿಸುವ ಕೆಲಸ ನಡೆದಿದೆ. ಅದೇ ರೀತಿ ಬೇರೆ ಪಂಚಾಯಿತಿಗಳಲ್ಲೂ ಸರ್ವೆ ಮಾಡಿಸಿ ಮುಂದಿನ ಕ್ರಮಕೈಗೊಳ್ಳಬೇಕು ಎಂದರು.





