ಎಚ್.ಡಿ.ಕೋಟೆ: ಕೆರೆಯಲ್ಲಿ ಎತ್ತುಗಳಿಗೆ ನೀರು ಕುಡಿಸಲು ಹೋಗಿ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಎಲೆಹುಂಡಿ ಸಮೀಪದ ಚಿಕ್ಕಾಳೆ ಗೌಡನಪುರದ ಗ್ರಾಮದ ಚಂದ್ರು ಅವರ ಮಗ, ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಹರೀಶ್ ಸಾವಿಗೀಡಾದ ವಿದ್ಯಾರ್ಥಿ.
ಮಂಗಳವಾರ ಮಧ್ಯಾಹ್ನ ಗ್ರಾಮದಲ್ಲಿರುವ ಕೆರೆಯಲ್ಲಿ ತಮ್ಮ ಎತ್ತುಗಳಿಗೆ ನೀರು ಕುಡಿಸಲೆಂದು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯಲ್ಲಿ ಮುಳುಗಿದ್ದಾರೆ. ಎತ್ತುಗಳು ಮಾತ್ರ ಮನೆಗೆ ವಾಪಸ್ ಬಂದ ಹಿನ್ನೆಲೆಯಲ್ಲಿ ತಂದೆ ಮತ್ತು ಪೋಷಕರು ಅನೇಕ ಕಡೆ ಹುಡುಕಿ, ಕೊನೆಗೆ ಕೆರೆಯಲ್ಲಿ ನೋಡಿದಾಗ ಹರೀಶ್ ಮುಳುಗಿರುವುದು ಗೊತ್ತಾಗಿ, ಅಗ್ನಿಶಾಮಕ ದಳದವರಿಗೆ ವಿಚಾರ ತಿಳಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು.





