Mysore
21
mist

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುವಾಗ ಎಚ್ಚರಿಕೆ ವಹಿಸಬೇಕು: ಎಚ್‌.ಎ.ವೆಂಕಟೇಶ್‌

ಮೈಸೂರು: ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್‌ ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದೆ. ಇನ್ನುಂದೆಯಾದರೂ ಸಿಎಂ ಸಿದ್ದರಾಮಯ್ಯ ಅವರ ಆರೋಪ ಮೇಲೆ ಆರೋಪ ಮಾಡುವಾಗ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್‌ ಟಾಂಗ್‌ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು(ಫೆಬ್ರವರಿ.೭) ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರಾಜಕೀಯ ಪ್ರೇರಿತವಾಗಿ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರಾಕರಿಸಿರುವ ಹೈಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಸಹಿಸದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕುತಂತ್ರ ರಾಜ್ಯ ರಾಜಕಾರಣಕ್ಕೆ ತಡೆ ಒಡ್ಡಿದಂತಾಗಿದೆ. ಮುಡಾ ಪ್ರಕರಣದಲ್ಲಿ ಅನವಶ್ಯಕವಾಗಿ ಸಿದ್ದರಾಮಯ್ಯನವರ ಹೆಸರನ್ನು ಎಳೆದು ತಂದು ರಾಜ್ಯದ ರಾಜಕಾರಣಕ್ಕೆ ಮಸಿ ಬಳಿಯಲು ಪ್ರಯತ್ನಿಸಿದವರಿಗೆ ಇಂದಿನ ಹೈಕೋರ್ಟ್‌ ತೀರ್ಪು ಸರಿಯಾದ ಉತ್ತರ ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದು ರಾಜ್ಯದ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರದ ಮೇಲೆ ಆರೋಪಿಸುವಾಗ ಬಹಳ ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ. ಇದು ಸಿದ್ದರಾಮಯ್ಯನವರಿಗೆ ಮಾತ್ರ ಅನ್ವಯಿಸುವುದಿಲ್ಲ. ಅದು ರಾಜ್ಯದ ಜನತೆಯ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುವುದರಿಂದ ಇಡೀ ರಾಜ್ಯದ ಜನತೆಗೆ ಅನ್ವಯಿಸುವ ವಿಚಾರವಾಗಿರುತ್ತದೆ ಎಂದರು.

ನಮ್ಮ ರಾಜ್ಯದ ರಾಜಕಾರಣ ದೇಶಕ್ಕೆ ಮಾದರಿಯಾಗಿರಬೇಕೆ ಹೊರತು ವೈಯಕ್ತಿಕ ದ್ವೇಷದಿಂದ ಆರೋಪ ಮಾಡುವುದು ಅತ್ಯಂತ ಕೆಟ್ಟ ಸಂಪ್ರದಾಯ. ಇಂತಹ ಕೆಟ್ಟ ಸಂಪ್ರದಾಯ ಕೊನೆಗಾಣಿಸುವ ಹೊಣೆಗಾರಿಕೆ ಪ್ರತಿಯೊಬ್ಬರದಾಗಿರುತ್ತದೆ. ಇದರಲ್ಲಿ ನ್ಯಾಯಾಲಯದ ಪಾತ್ರವೂ ಇರುತ್ತದೆ. ಹೀಗಾಗಿ ಹೈಕೋರ್ಟ್‌ನ ತೀರ್ಪು ನ್ಯಾಯ ಸಮ್ಮತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನೂ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕ ದ್ವೇಷಕ್ಕೆ ಹೇಳಿಕೆ ನೀಡಿದರೆ ರಾಜ್ಯದ ರಾಜಕಾರಣಕ್ಕೆ , ಆಡಳಿತಕ್ಕೆ ಹಾಗೂ ಸಾರ್ವಜನಿಕರಿಗೆ ಮಾಡಿದ ಅಪಚಾರವೆಂದು ಭಾವಿಸಬೇಕಾಗುತ್ತದೆ. ಈಗಾಗಲೇ ಮುಡಾ ಪ್ರಕರಣದಲ್ಲಿ ಇ.ಡಿ. ಮತ್ತು ಲೋಕಾಯುಕ್ತ ಸಂಸ್ಥೆಗಳೂ ತನಿಖೆ ನಡೆಸುತ್ತಿವೆ. ಹೀಗಿರುವಾಗ ಸಿಬಿಐ ತನಿಖೆಗೆ ಒತ್ತಾಯಿಸುವುದು ನ್ಯಾಯ ಸಮತವಲ್ಲ ಎಂಬುದು ತೀರ್ಪಿನಿಂದ ಸಾಬೀತಾಗಿದೆ. ಲೋಕಾಯುಕ್ತ ತನಿಖೆಯ ಅಂತಿಮ ತೀರ್ಪು ಬರುವುದಕ್ಕೆ ಮೊದಲೇ ಎಲ್ಲವನ್ನು ಊಹಿಸಿಕೊಂಡು ಮಾತನಾಡುವ ವ್ಯಕ್ತಿಗಳ ಹಿಂದೆ ಯಾವ ಮರ್ಮ ಅಡಗಿದೆ ಎಂಬುದನ್ನು ಎಲ್ಲರಿಗೂ ಗೋಚರವಾಗುತ್ತದೆ. ಈ ತೀರ್ಪಿನಿಂದ ಸಿದ್ದರಾಮಯ್ಯನವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಬೆಂಬಲ ದೊರಕಿದಂತಾಗಿದೆ ಎಂದು ತಿಳಿಸಿದರು.

Tags:
error: Content is protected !!