Mysore
20
overcast clouds
Light
Dark

ಗ್ಯಾರಂಟಿಗಳ ಸಮಾವೇಶ ಮಾರ್ಚ್ 15 ಕ್ಕೆ – ಹೆಚ್.ಸಿ.ಮಹದೇವಪ್ಪ

ಮೈಸೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಸಮಾವೇಶ ಮಾರ್ಚ್ 15 ರ ಮಧ್ಯಾಹ್ನ 12 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹಾದೇವಪ್ಪ ಹೇಳಿದರು.

ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಗ್ಯಾರಂಟಿ ಗಳ ಸಮಾವೇಶ, ಬರ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಸಮಾವೇಶವನ್ನು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಉಧ್ಘಾಟಿಸಲಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು. ರಾಜ್ಯ ಸರ್ಕಾರ ವಾಗ್ದಾನ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು ಕೋಟ್ಯಂತರ ಜನರು ಯೋಜನೆಗಳ ಫಲಾನುಭವಿಗಳಾಗಿದ್ದಾರೆ.

ಸಮಾವೇಶದಲ್ಲಿ 50 ಸಾವಿರ ಫಲಾನುಭವಿಗಳು ಭಾಗಿಯಾಗಲಿದ್ದು ಅವರಿಗೆ ವ್ಯವಸ್ಥಿತ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ 6.73 ಲಕ್ಷ, ಗೃಹ ಜ್ಯೋತಿ 9 ಲಕ್ಷ, ಯುವನಿಧಿ 783, ಅನ್ನಭಾಗ್ಯ ಯೋಜನೆಯಲ್ಲಿ 22.76 ಲಕ್ಷ ಫಲಾನುಭವಿಗಳಿದ್ದು 7.10ಲಕ್ಷ ಪಡಿತರ ಚೀಟಿಗಳಿವೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ 256 ಗ್ರಾ.ಪಂ ಹಾಗೂ 16 ಸ್ಥಳೀಯ ಸಂಸ್ಥೆಗಳಿಂದ 50 ಸಾವಿರ ಫಲಾನುಭವಿಗಳು ಆಗಮಿಸುತಿದ್ದು, 500 ಬಸ್ ಗಳ ಏರ್ಪಾಡು ಮಾಡಲಾಗಿದೆ.

ಸಂಬಂಧಿಸಿದ ಅಧಿಕಾರಿಗಳು ಸಮಾವೇಶಕ್ಕೆ ಆಗಮಿಸುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ವೇದಿಕೆ,ಆಹಾರದ ವ್ಯವಸ್ಥೆಯ ಜವಾಬ್ದಾರಿಯನ್ನು ಮೂಡ ಆಯುಕ್ತರು ನೋಡಿಕೊಳ್ಳಬೇಕೆಂದರು.

ಬರ ಪರಿಶೀಲನಾ ಸಭೆ : ಬರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು ಯಾವುದೇ ಜಲಮೂಗಳ ನೀರನ್ನು ಕುಡಿಯುವ ನೀರು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸಬಾರದು ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿಮಾಡಿ ಪರಿಸ್ಥಿತಿ ನಿಭಾಯಿಸಲು ಜಿಲ್ಲಾ ಹಾಗೂ ತಾಲೂಕು ಆಡಳಿತಗಳು ಸಿದ್ದವಾಗಿರಬೇಕು ಎಂದರು.

ಆದಷ್ಟು ಹೊಸ ಕೊಳವೆ ಬಾವಿ ತೋಡಿಸುವುದಕ್ಕಿಂತ ಇರುವ ಕೊಳವೆ ಬಾವಿಗಳನ್ನು ದುರಸ್ತಿಪಡಿಸಿ ಮೋಟಾರ್,ಪಂಪ್ ಅಳವಡಿಸಿ ಹಾಗೂ ಈ ಸಂದರ್ಭದಲ್ಲಿ ಒಂದು ಹನಿ ನೀರು ಪೋಲಾಗದಂತೆ ನೋಡಿಕೊಳ್ಳಿ ಅವಶ್ಯ ಬಿದ್ದರೆ ಖಾಸಗಿ ಬೋರ್ ವಲ್ಗಳನ್ನು ಉಪಯೋಗಿಸಿಕೆೊಳ್ಳಿ ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮಾತನಾಡಿ, ನದಿಪಾತ್ರದಲ್ಲಿ ಪಂಪ್ಸೆಟ್ಗಳನ್ನು ತೆರವುಗೊಳಿಸಲಾಗಿದೆ, ಕುಡಿಯುವ ನೀರನ್ನು ಕೃಷಿಗೆ ಬಳಸದಂತೆ ಜಾಗೃತಿ ಮೂಡಿಸಲಾಗಿದೆ ಅಗತ್ಯಬಿದ್ದರೆ ಹಾರಂಗಿ ಹೇಮಾವತಿಯಿಂದಲೂ ನೀರು ಬಳಸಿಕೊಳ್ಳಲಾಗುವುದೆಂದರು.

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಂಜಿತ್ ಮಾಹಿತಿ ನೀಡಿ ಪ್ರಸ್ತುತ 2 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಖಾಸಗಿ ಬೋರ್ವೆಲ್ ಮೂಲಕ ನೀರು ಕೊಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ 134 ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗುವ ಸಂಭವವಿದೆ ಈ ಪೈಕಿ 36 ಗ್ರಾಮಗಳಿಗೆ ಪ್ರತಿನಿತ್ಯ ನೀರು ಪೂರೈಸಲಾಗುತ್ತಿದೆ ಎಂದರು

ಪಶು ಸಂಗೋಪನಾ ಇಲಾಖೆ ಅಧಿಕಾರಿ ಮಾಹಿತಿ ನೀಡಿ, 34 ವಾರಗಳಿಗಾಗುವಷ್ಟು ಮೇವು ಲಭ್ಯವಿದ್ದು ರೈತರಿಗೆ ಮೇವಿನ ಪೊಟ್ಟಣಗಳನ್ನೂ ಕೊಡಲಾಗುವುದು.

ಈಗಾಗಲೇ 68 ಸಾವಿರ ಮೇವಿನ ಕಿಟ್ಗಳನ್ನು ನೀಡಲಾಗಿದೆ, ಸದ್ಯ ಗೋಶಾಲೆ ತೆರೆಯುವ ಅವಶ್ಯಕತೆ ಇಲ್ಲ.ಈಗಾಗಲೇ ಅಂತರಾಜ್ಯ ಮೇವು ಸಾಗಣೆ ನಿರ್ಬಂಧ ಜಾರಿಯಲ್ಲಿದೆ ಎಂದರು.

ಕೃಷಿ ಇಲಾಖೆ ಜಂಟಿ ನರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿ ಪೂರ್ವ ಮುಂಗಾರಿನಲ್ಲಿ ಹತ್ತಿ ಬೀಜಗಳ ಕೊರತೆ ಉಂಟಾಗಿದ್ದು , ಗುಣಮಟ್ಟ ಕಡಿಮೆ ಇದೆ ಸದ್ಯ ರೈತ ಸಂಪರ್ಕ ಕೇಂದ್ರಗಳಲ್ಲಿ 1.20ಲಕ್ಷ ಪಾಕೆಟ್ ಹತ್ತಿ ಬೀಜ ದೊರೆಯಲಿವೆ ಎಂದರು.

ಈಗಾಗಲೇ ಬರ ಪರಿಹಾರದಡಿ ತಲಾ 2 ಸಾವಿರ ರೂಗಳಂತೆ ಜಿಲ್ಲೆಯ 88,620 ರೈತರಿಗೆ 15 ಕೋಟಿ 83 ಲಕ್ಷ ಪರಿಹಾರ ಖಾತೆಗಳಿಗೆ ಜಮೆಯಾಗಿದೆ ಎಂದರು.

ಸಭೆಯಲ್ಲಿ ಜಿ.ಪಂ.ಸಿಇಒ ಕೆ.ಎಂ.ಗಾಯತ್ರಿ, ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ