ಮೈಸೂರು: ಯುವಕನೋರ್ವನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಎಂಎಲ್‌ಸಿ ಸೂರಜ್ ರೇವಣ್ಣ ವಿರುದ್ಧದ ಕ್ರಮಕ್ಕೆ ಪಕ್ಷದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಭಾನುವಾರ (ಜೂನ್. 23) ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಈ ಪ್ರಕರಣದ ಸಂಬಂಧ ನನಗೆ ಯಾವುದೇ ಮಾಹಿತಿಯಿಲ್ಲ. ಸೂರಜ್ ಬಂಧನದ ವಿಚಾರವೂ ನನಗೆ ಮಾಧ್ಯಮದಿಂದಲೇ ತಿಳಿಯಿತು. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲಿದೆ. ಪಕ್ಷ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ನನ್ನ ಮಗನಾಗಲಿ, ನನ್ನ ಸಂಬಂಧಿಗಳೇ ಇರಲಿ, ಪಕ್ಷದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ಪರವಾಗಿ ಎಂದೂ ನಿಲ್ಲುವುದಿಲ್ಲ. ನಾನು ತಪ್ಪು ಮಾಡಿದವರ ಪರ ಎಂದೂ ನಿಲ್ಲುವುದಿಲ್ಲ ಎಂದರು.
ಸೂರಜ್ ರೇವಣ್ಣ ಬಂಧನದಿಂದ ಪಕ್ಷಕ್ಕೆ ಮುಜುಗರ ತಂದಿದೆಯಾ ಎಂಬ ಪ್ರಶ್ನೆಗೆ, ರಾಜ್ಯದಲ್ಲಿ ಯಾರೋ ಒಬ್ಬರು ತಪ್ಪು ಮಾಡಿದರೇ ಅದಕ್ಕೆ ಆರೂವರೆ ಕೋಟಿ ಜನರು ಕಾರಣವೇ? ಇಲ್ಲಾ ತಾನೆ? ಎಂದು ಪ್ರತಿಕ್ರಿಸಿದರು.