Mysore
18
broken clouds

Social Media

ಶನಿವಾರ, 31 ಜನವರಿ 2026
Light
Dark

ರಾಜೀನಾಮೆ ಕೊಡಿ ಚುನಾವಣೆಗೆ ನಿಲ್ಲೋಣ; ಸಿದ್ದರಾಮಯ್ಯಗೆ ಜಿ.ಟಿ ದೇವೇಗೌಡ ಸವಾಲು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡ ಬಹಿರಂಗ ಸವಾಲೊಂದನ್ನು ಹಾಕಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಏನು ಕಡಿದು ಕಟ್ಟಿ ಹಾಕಿದ್ದಾರೆ? ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾದ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡ, ನೀವು ವರುಣ ಕ್ಷೇತ್ರಕ್ಕೆ ರಾಜೀನಾಮೆ ಕೊಡಿ. ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ರಾಜೀನಾಮೆ ಕೊಡುತ್ತೇನೆ. ಇಬ್ಬರೂ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಗೆ ಕಣಕ್ಕಿಳಿಯೋಣ. ಯಾರು ಗೆಲ್ಲುತ್ತಾರೆ ನೋಡೋಣ ಬನ್ನಿ ಎಂದು ಸವಾಲು ಹಾಕಿದರು.

ಅಭಿವೃದ್ಧಿ ಅಂದ್ರೆ ಏನು ಎಂಬುದೇ ಸಿದ್ದರಾಮಯ್ಯಗೆ ಗೊತ್ತಿಲ್ಲ. ಅಭಿವೃದ್ಧಿ ಮಾಡದೇ ರಾಜಕೀಯದಲ್ಲಿ ಬೆಳದಿದ್ದಾರೆ ಎಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಟೀಕಿಸಿದರು.

ಎಷ್ಟು ದಿನ ಮುಖ್ಯಮಂತ್ರಿ ಆಗಿರ್ತಿರಿ, ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಾ ನೋಡೋಣ. ನಮಗೆ ನೋವು ಕೊಡುತ್ತಲೇ ಇದ್ದೀರಿ. ಪದೇ ಪದೇ ಬಂದು ಯಾಕೆ ಈ ರೀತಿ ಚುಚ್ಚು ಮಾತುಗಳನ್ನು ಆಡುತ್ತೀರಿ? ಮೌನವಾಗಿ ಮರ್ಯಾದೆಯಿಂದ ಇರಿ. 35 ಸಾವಿರ ಮತಗಳ ಅಂತರದಿಂದ ನಿಮ್ಮನ್ನು ಸೋಲಿಸಿದ್ದಾಗಲೂ ನಿಮ್ಮ ಬಗ್ಗೆ ನಾನು ಅಗೌರವದಿಂದ ಮಾತಾಡಿಲ್ಲ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿನ, ತಹಶೀಲ್ದಾರ್‌, ಬಿಇಒ ಮೊದಲಾದವರೆಲ್ಲರೂ ಮುಖ್ಯಮಂತ್ರಿ ಬಂಧುಗಳೇ. ಹೆಸರಿಗೆ ನಾನು ಅಲ್ಲಿ ಶಾಸಕ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಲ್ಲಾ ನಿಮ್ಮದೇ. ಗುತ್ತಿಗೆದಾರರು ಕಮೀಷನ್‌ ಅನ್ನು ನಿಮ್ಮ ಪುತ್ರನಿಗೆ ಕೊಡಬೇಕು. ಯತೀಂದ್ರ ಸಿದ್ದರಾಮಯ್ಯ ನಮ್ಮ ಕ್ಷೇತ್ರದಲ್ಲಿ ಕಮೀಷನ್‌ ಪಡೆಯುತ್ತಿದ್ದಾರೆ. ನಿಮ್ಮದು 60% ಕಮಿಷನ್‌ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!