ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಈ ಬಾರಿಯೂ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗಲಿದೆ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳೀದ್ದಾರೆ.
ಆ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಎಲ್ಲಾ ಊಹಾಪೋಹಗಳಿಗೆ ಜಿಟಿ ದೇವೆಗೌಡ ಸ್ಪಷ್ಟನೆ ನೀಡಿದ್ದಾರೆ.
ಈ ಬಾರಿ ನೂರಕ್ಕೆ ನೂರರಷ್ಟು ಪ್ರತಿಶತ ಪ್ರತಾಪ್ ಸಿಂಹರಿಗೆ ಟಿಕೆಟ್ ಸಿಗಲಿದೆ. ತುಳಸಿ ದಾಸಪ್ಪರ ನಂತರ ಮೈಸೂರಿನಿಂದ ಒಕ್ಕಲಿಗರೊಬ್ಬರು ಸಂಸದರಾಗಿದ್ದಾರೆ. ನಾನು ಕಳೆದೆರೆಡು ಚುನಾವಣೆಯಲ್ಲಿ ಪ್ರತಾಪ್‌ರಿಗೆ ಬೆಂಬಲ ಸೂಚಿಸಿದ್ದೆ. ಈ ಬಾರಿಯೂ ಅವರಿಗೆ ನಮ್ಮ ಬೆಂಬಲ ಇರಲಿದೆ.
ಕಳೆದ ಹತ್ತು ವರ್ಷಗಳಲ್ಲಿ ಪ್ರತಾಪ್ ಸಿಂಹ ಸಂಸದರಾಗಿ ಹಲವಾರು ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಶಾಸಕ ಜಿ.ಟಿ ದೇವೇಗೌಡ ಪ್ರತಾಪ್ ಸಿಂಹ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನು ಜಿಟಿಡಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳಿಗೆ ಸಂಬಂಧಿಸಿದಂತೆ ಅಂತಹ ಯಾವುದೇ ಸಂದರ್ಭ ಈವರೆಗೆ ಬಂದಿಲ್ಲ, ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ. ನಮ್ಮ ಗುರಿ ಕೇವಲ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.