Mysore
79
light rain

Social Media

ಭಾನುವಾರ, 03 ನವೆಂಬರ್ 2024
Light
Dark

೨ ತಿಂಗಳಿಂದ ಬಂದಿಲ್ಲ ಗೃಹಲಕ್ಷ್ಮೀ ಹಣ ; ಸಿದ್ದರಾಮಯ್ಯ ಸರ್ಕಾರಕ್ಕೆ ಮಹಿಳೆಯರ ಹಿಡಿಶಾಪ

ಮೈಸೂರು : ರಾಜ್ಯದಲ್ಲಿ ದಿನಬೆಳಗಾದ್ರೆ ಹಗರಣಗಳ ಚರ್ಚೆ, ವಾದ-ವಿವಾದ, ಆರೋಪ-ಪ್ರತ್ಯಾರೋಪಗಳು, ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಮಾಡುತ್ತಿರುವುದೇ ನಡೆಯುತ್ತಿದೆ. ಇದರ ಮಧ್ಯೆ ಎಲ್ಲೋ ಒಂದು ಕಡೆ ಸರ್ಕಾರ ಕೂಡ ಈ ಗ್ಯಾರಂಟಿ ಯೋಜನೆ ಬಗ್ಗೆ ಗಮನಕೊಡುವುದನ್ನ ನಿಲ್ಲಿಸಿದೆ ಅನಿಸುತ್ತೆ. ಯಾಕೆಂದರೆ ಮಹಿಳೆಯರಿಗೆ ಪ್ರತಿ ತಿಂಗಳು ನೀಡುತ್ತಿದ್ದ ಗೃಹಲಕ್ಷ್ಮೀ ಹಣ ನಿಂತು ಹೋಗಿ ೨ ತಿಂಗಳು ಆಗಿದೆ. ಹೀಗಾಗಿ ಮಹಿಳೆಯರು ಸಿದ್ದರಾಮಯ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಈ ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತ ಕೇಳಿತ್ತು.  ಅದರಲ್ಲೂ ಪತ್ರಿ ಗ್ಯಾರಂಟಿ ಕಾರ್ಡ್‌ ಗಳ ಮೇಲೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ಅವರ ಸಹಿ ಸಹ ಇತ್ತು. ಈ ಗ್ಯಾರಂಟಿ ಕಾರ್ಡ್‌ಗಳು ಚುನಾವಣೆಯಲ್ಲಿ ವರ್ಕ್‌ ಆಗಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಸೋಲಿನ ರುಚಿ ತೋರಿಸಿತು. ಕಾಂಗ್ರೆಸ್‌ ಅಂದುಕೊಂಡಂತೆ ಅಧಿಕಾರಕ್ಕೆ ಬಂತು. ಆರಂಭದಲ್ಲಿ ಈ ಗೃಹಲಕ್ಷ್ಮೀ ಯೋಜನೆಯ ೨೦೦೦ ಸಾವಿರ ರೂಪಾಯಿ ಹಣ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್‌ ಖಾತೆಗೆ ಹೋಗುತ್ತಿತ್ತು. ಆದರೆ ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ಬಳಿಕ ಈ ಯೋಜನೆಗಳು ಸರಿಯಾಗಿ ವರ್ಕ್‌ ಆಗುತ್ತಿಲ್ಲ. ಎಲ್ಲೋ ಒಂದು ಕಡೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನರು ನಿರೀಕ್ಷಿತ ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸದೇ ಇರುವುದಕ್ಕೆ ಗೃಹಲಕ್ಷ್ಮೀ ಹಣ ಬರುತ್ತಿಲ್ವಾ ಎನ್ನುವ ಪ್ರಶ್ನೆ ಮೂಡುತ್ತಿದೆ.

ಇದೆಲ್ಲಾ ಒಂದು ಕಡೆಯಾದ್ರೆ ಗೃಹಲಕ್ಷ್ಮೀ ಹಣವನ್ನೆ ನಂಬಿಕೊಂಡು ಜೀವನ ಮಾಡುತ್ತಿದ್ದ ಮಹಿಳೆಯರ ಪಾಡು ನಿಜಕ್ಕೂ ಹೇಳತೀರದಾಗಿದೆ. ಯಾಕೆಂದರೆ ಪ್ರತಿತಿಂಗಳು ೨ ಸಾವಿರ ರೂಪಾಯಿ ಬ್ಯಾಂಕ್‌ ಖಾತೆಗೆ ಬರುತ್ತಿದ್ದರಿಂದ ತಮ್ಮ ಗಂಡನ ಬಳಿ ಹಣ ಕೇಳೋದನ್ನೆ ಬಿಟ್ಟು, ತಮಗೆ ಏನು ಬೇಕು ಬೇಡ ಅನ್ನೋದನ್ನ ನೋಡ್ಕೊಳ್ಳುತ್ತಿದ್ದರು. ಇನ್ನ ಕೆಲ ಮಹಿಳೆಯರು ಈ ಗೃಹಲಕ್ಷ್ಮೀ ಹಣ ನಂಬಿಕೊಂಡು ಖಾಸಗಿ ಫೈನಾನ್ಸ್‌ ಸಂಸ್ಥೆಗಳಲ್ಲಿ ಸಾಲವನ್ನು ಸಹ ತೆಗೆದುಕೊಂಡಿದ್ದಾರೆ. ಆದರೆ  ಕಳೆದ ೨ ತಿಂಗಳಿಂದ ಈ ಗೃಹಲಕ್ಷ್ಮೀ ಹಣ ಬರುತ್ತಿಲ್ಲ. ಪ್ರತಿದಿನ ಮಹಿಳೆಯರು ಬ್ಯಾಂಕ್‌ ಗೆ ಹೋಗಿ ಪಾಸ್‌ ಬುಕ್‌ ಎಂಟ್ರಿ ಮಾಡಿಸಿಕೊಂಡು ದುಡ್ಡು ಬಂತಾ, ಇಲ್ವಾ ಅಂತ ಚೆಕ್‌ ಮಾಡಿಕೊಂಡು ವಾಪಸ್‌ ಆಗುತ್ತಾ ಸಿದ್ದರಾಮಯ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಗೃಹಲಕ್ಷ್ಮೀ ಹಣದ ಬಗ್ಗೆ ಮಹಿಳೆಯರು ಏನು ಹೇಳ್ತಾರೆ ನೋಡಿ..!

ಆಯ್ಯೋ ಈ ಬ್ಯಾಂಕ್‌ ಗೆ ಹತ್ತಾರು ಸಲ ಹೋಗಿ ಪಾಸ್‌ ಬುಕ್‌ ಎಂಟ್ರಿ ಮಾಡಿಸಿಕೊಂಡು ಬರುತ್ತಿದ್ದೇವೆ ಆದರೆ ಸರ್ಕಾರದ ಹಣ ಮಾತ್ರ ಬರುತ್ತಿಲ್ಲ. ಆ ೨ ಸಾವಿರ ಹಣ ಬಂತ ಅಂತ ನೋಡೋಕ್ಕೆ ಹೋಗಿ ಹೋಗಿ ನನ್ನ ಬಳಿ ಇದ್ದ ೨ ಸಾವಿರ ಹಣವೇ ಖಾಲಿಯಾಗಿದೆ. ಮೇ ೪ನೇ ತಾರೀಕು ಹಾಕಿದ್ದೆ ಕೊನೆ ನನಗೆ ಇನ್ನ ಯಾವುದೇ ದುಡ್ಡು ಬಂದಿಲ್ಲ. ಸಿದ್ದರಾಮಯ್ಯ ಆರಂಭದಲ್ಲಿ ೨ ಸಾವಿರ ಹಾಕಿದ್ರು, ಈಗ ನೋಡಿದ್ರೆ ೨ ತಿಂಗಳಿಂದ ದುಡ್ಡು ಬಂದಿಲ್ಲ. ಈ ಕಾಟಾಚಾರಕ್ಕೆ ಯಾಕೆ ಯೋಜನೆ ಜಾರಿ ಮಾಡಬೇಕಿತ್ತು ಎಂದು ಮೈಸೂರಿನ ಜೆ.ಪಿ ನಗರದ ನಿವಾಸಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಗೃಹಲಕ್ಷ್ಮೀ ಹಣ ಬಂದ ಬಳಿಕ ಮಕ್ಕಳು ಹಾಗೂ ನನ್ನ ಗಂಡ ಹಣ ಕೊಡುವುದನ್ನ ನಿಲ್ಲಿಸಿಬಿಟ್ಟರು. ಈಗ ನನ್ನ ಬಳಿ ಮನೆ ಖರ್ಚು, ಆಸ್ಪತ್ರೆ ಖರ್ಚು ಹಾಗೂ ಔಷಧಿ ಖರ್ಚಿಗೂ ಗಣ ಇಲ್ಲ. ಮನೆಯಲ್ಲಿ ಕೇಳಿದ್ರೆ ಗೃಹಲಕ್ಷ್ಮೀ ಹಣ ಇಲ್ವಾ ಹೋಗಿ ಅದರಲ್ಲೆ ತಕೋ ಅಂತಾರೆ. ಆದರೆ ೨ ತಿಂಗಳಿಂದ ಸಿದ್ದರಾಮಯ್ಯ ದುಡ್ಡೇ ಹಾಕಿಲ್ಲ, ನಾನು ಎಲ್ಲಿಂದ ದುಡ್ಡು ತರಲಿ. ಬೇಗ ಸಿದ್ದರಾಮಯ್ಯ ಸರ್ಕಾರ ದುಡ್ಡು ಹಾಕಿದ್ರೆ ನಾನು ಪರದಾಡೋದು ತಪ್ಪುತ್ತೆ ಅಂತಾ ಲಕ್ಷ್ಮಮ್ಮ ಹೇಳಿದ್ದಾರೆ.

ಒಟ್ಟಾರೆಯಾಗಿ ಗೃಹಲಕ್ಷ್ಮೀ ಯೋಜನೆಯ ಹಣ ಬರದೆ ಇರುವುದಕ್ಕೆ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ಕಾರಕ್ಕೆ ಶಾಪಹಾಕುತ್ತಿದ್ದಾರೆ. ಇನ್ನಾದ್ರೂ ಸಿದ್ದರಾಮಯ್ಯ ಅವರ ಸರ್ಕಾರ ಎಚ್ಚೆತ್ತುಕೊಂಡು ಗೃಹಲಕ್ಷ್ಮೀ ಹಣವನ್ನು ಮಹಿಳೆಯರ ಖಾತೆಗೆ ಹಾಕುವ ಮೂಲಕ ಮಹಿಳೆಯರ ಕೋಪ ತಣ್ಣಗಾಗಿಸುತ್ತಾರಾ..? ಇಲ್ಲಾ ಮತ್ತಷ್ಟು ಕೆಂಗಣ್ಣಿಗೆ ಗುರಿಯಾಗುತ್ತಾರಾ ಎಂಬುವುದನ್ನ ಕಾದು ನೋಡಬೇಕಾಗಿದೆ.

Tags: