Mysore
32
overcast clouds

Social Media

ಭಾನುವಾರ, 12 ಏಪ್ರಿಲ 2026
Light
Dark

ಸರ್ಕಾರಿ ಅಧಿಕಾರಿಗಳಿಗೆ ಲೋಕಾ ಶಾಕ್‌ : ಮೈಸೂರು ಸೇರಿ ಹಲವೆಡೆ ದಾಳಿ

ಮೈಸೂರು : ಲೋಕಾಯುಕ್ತ ಅಧಿಕಾರಿಗಳು ಮೈಸೂರು, ದಾವಣಗೆರೆ, ಬೆಂಗಳೂರು, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿ ನಾಲ್ವರು ಸರ್ಕಾರಿ ಅಧಿಕಾರಿಗಳ ಅಕ್ರಮ ಸಂಪತ್ತು ಬಯಲಿಗೆಳೆದಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆಂದು ಬಂದ ದೂರುಗಳನ್ನು ಆಧರಿಸಿ ಅದನ್ನು ಖಚಿತಪಡಿಸಿಕೊಂಡು ಬೆಳ್ಳಂಬೆಳಿಗ್ಗೆ ಸುಮಾರು 20 ಕ್ಕೂ ಹಚ್ಚು ಕಡೆ ಏಕಕಾಲದಲ್ಲಿ ಈ ದಾಳಿ ನಡೆಸಲಾಗಿದೆ. ಮೈಸೂರಿನಲ್ಲಿ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಪುರುಷೋತ್ತಮ ದಾಸ್, ದಾವಣಗೆರೆಯಲ್ಲಿ ಬೆಸ್ಕಾಂನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎಚ್.ಅರ್ಜುನ್, ಬೆಂಗಳೂರಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಸೂಪರಿಂಟೆಂಡಿಂಗ್ ಇಂಜಿನಿಯರ್ ಹೆಚ್.ಎಂ.ಜನಾರ್ಧನ್ ಹಾಗೂ ದಾರವಾಡದ ಸರ್ವೇಯರ್ ಸೋಮಲಿಂಗಪ್ಪ ಅವರಿಗೆ ಲೋಕಾ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಮುಖ್ಯ ಇಂಜಿನಿಯರ್ ಪುರುಷೋತ್ತಮ ದಾಸ್ ಅವರ ಮೈಸೂರಿಲ್ಲಿರುವ ಮನೆ, ಕಚೇರಿ ಸೇರಿದಂತೆ 11 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನಲ್ಲೆ 5 ಕಡೆ, ಬೆಂಗಳೂರಿನಲ್ಲಿ 6 ಕಡೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಸೇರಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ.

ಕ್ರೈಸ್ ಎಸ್‌ಇ ಜನಾರ್ಧನ್ ಅವರ ಮನೆಯಲ್ಲಿ 1.70 ಕೋಟಿ ರೂ.ನಗದು ಪತ್ತೆಯಾಗಿದೆ. ಶೋಧ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ದಾವಣಗೆರೆಯ ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅರ್ಜುನ್ ಅವರು ವಾಸವಿದ್ದ ನಿಟ್ಟುವಳ್ಳಿಯಲ್ಲಿರುವ ಮನೆ ಹಾಗು ಶಿವಮೊಗ್ಗದ ವಿಜಯನಗರ ಮತ್ತು ಗೋಪಾಲಗೌಡ ಬಡಾವಣೆಯಲ್ಲಿರುವ ಮನೆ ಮೇಲೆ ಅಽಕಾರಿಗಳ ತಂಡ ದಾಳಿ ಮಾಡಿದೆ.

ಇದಲ್ಲದೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ತಳಲೆ ಗ್ರಾಮದಲ್ಲಿ 2.5 ಎಕರೆ ಮತ್ತು 4.5 ಎಕರೆ ವಿಸ್ತೀರ್ಣದ ಬೃಹತ್ ಫಾರ್ಮ್ ಹೌಸ್‌ಗಳ ಮೇಲೂ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಧಾರವಾಡದಲ್ಲಿ ಸರ್ವೇಯರ್ ಸೋಮಲಿಂಗಪ್ಪ ಅವರ ಭಾರತಿ ನಗರದ ನಿವಾಸ ಹಾಗೂ ಎಡಿಎಲ್‌ಆರ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿದ್ದಾರೆ.

Tags:
error: Content is protected !!