ಮೈಸೂರು : ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ತಾಂಡವವಾಡುತ್ತಿದ್ದು, ಬಹುತ್ವ ಭಾರತ ಉಳಿಸಿಕೊಳ್ಳಲು ಕೇಂದ್ರದಲ್ಲಿ ಬಿಜೆಪಿ ಪಕ್ಷವನ್ನು ಕಿತ್ತೊಗೆದು ಕಾಂಗ್ರೆಸ್ ಬರುವಂತೆ ಮಾಡಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಲು ಜನರು ಮತದಾನದ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು.
ರಾಜ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸದಿರಲು ನಿರ್ಧರಿಸಿದ್ದರಿಂದ ನಮ್ಮ ಪಕ್ಷದ ವತಿಯಿಂದ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೇರ ಬೆಂಬಲ ನೀಡುತ್ತಿದ್ದೇವೆ ಎಂದು ತಿಳಿಸಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿ, ಅವರಿಗೆ ಮಧುಮೇಹ ಕಾಯಿಲೆ ಇರುವುದು ಗೊತ್ತಿದ್ದರೂ ಜೈಲಿನಲ್ಲಿ ಇನ್ಸುಲಿನ್ ನೀಡದೆ ಶೋಷಣೆ ಮಾಡಿ ಈ ವಿಚಾರವನ್ನು ದೇಶಾದ್ಯಂತ ಚರ್ಚೆಯಲ್ಲಿರುವಂತೆ ಮಾಡಿದರು. ಇಂಥ ರಾಕ್ಷಸ ಪ್ರವೃತ್ತಿಯ ಪ್ರಧಾನಮಂತ್ರಿ ಮತ್ತು ಗೃಹಮಂತ್ರಿ ಇರಬೇಕಾ, ಬೇಡ್ವಾ ಎಂದು ತೀರ್ವಾನಿಸುವ ಅಗತ್ಯವಿದೆ ಎಂದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡೆಯರ್ ಅವರ ಮಾವನಿಗೆ ರಾಜಸ್ಥಾನದಲ್ಲಿ ಸಮಸ್ಯೆಯಾಗಿರಬಹುದು. ಇಲ್ಲೂ ಇವರ ಆಸ್ತಿ ವ್ಯಾಜ್ಯದ ಒತ್ತಡಲ್ಲಿರಬಹುದು.
ಹಾಗಾಗಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಇಳಿದಿದ್ದಾರೆ ಎನ್ನಿಸುತ್ತದೆ. ಜಿಲ್ಲೆಯ ಜನ ಇವರಿಂದ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಜನ ಸಾಮಾನ್ಯರ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಪಕ್ಷದ ಎಂ.ಲಕ್ಷ್ಮಣ್ ಅವರು ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಅವರನ್ನು ಗೆಲ್ಲಿಸಿ ಇಂಡಿಯಾ ಮೈತ್ರಿಕೂಟಕ್ಕೆ ಬಲ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿ ಎಂದು ಹೇಳಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಆಮ್ ಅದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಮಾಳವಿಕಾ ಗುಬ್ಬಿವಾಣಿ, ಸೋಸಲೆ ಸಿದ್ಧರಾಜು, ಜಿಲ್ಲಾ ಘಟಕದ ಅಧ್ಯಕ್ಷ ಎಲ್.ರಂಗಯ್ಯ, ಹಾಗೂ ಕೆ.ಆರ್.ನಗರ ತಾಲ್ಲೂಕು ಕ್ಷೇತ್ರದ ಅಧ್ಯಕ್ಷ ಮುರುಗೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.