ಮೈಸೂರು: ಸಚಿವ ಸತೀಶ್ ಜಾರಕಿಹೊಳಿ ಅವರು ಈ ರಾಜ್ಯದ ಸಿಎಂ ಆಗಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.27) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಜಾರಕಿಹೊಳಿ ಅವರು ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಜೆಡಿಎಸ್ ಬೆಂಬಲ ಕೇಳಿರಬಹುದು. ಅಥವಾ ಇರುವ 18 ಶಾಸಕರ ಬೆಂಬಲವನ್ನು ಸತೀಶ್ ಜಾರಕಿಹೊಳಿ ಕೇಳಿರಬಹುದು. ಅಲ್ಲದೇ ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು. ಸದ್ಯದ ಪರಿಸ್ಥಿತಿ ನೋಡಿದರೆ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್‌ಡಿಕೆಯನ್ನು ಬೇರೆ ಕಾರಣಕ್ಕೆ ಭೇಟಿ ಮಾಡಿಲ್ಲ ಎಂದು ಹೇಳಿದರು.
ನಮ್ಮ ಪಕ್ಷದಿಂದ ಒಂದು ವೇಳೆ ಜೆಡಿಎಸ್ ಸತೀಶ್ ಜಾರಕಿಹೊಳಿಗೆ ಬೆಂಬಲ ನೀಡಿದರೂ ನಾನು ತಟಸ್ಥನಾಗಿರುತ್ತೇನೆ. ಈ ವಿಚಾರದಲ್ಲಿ ಮಾತ್ರ ಅಲ್ಲ ನಮ್ಮ ಪಕ್ಷದ ಬೇರೆ ನಿರ್ಧಾರಗಳಿಗೂ ನಾನು ತಟಸ್ಥ ತಟಸ್ಥ ಎಂದರು.





