ಮೈಸೂರು: ಟಿ.ನರಸೀಪುರದಲ್ಲಿ 13ನೇ ವರ್ಷದ ಕುಂಭಮೇಳ ಇಂದಿನಿಂದ ಪ್ರಾರಂಭವಾಗಿದ್ದು, ನಾಳೆ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.
ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ತ್ರಿವೇಣಿ ಸಂಗಮಕ್ಕೆ ಇಂದು(ಫೆಬ್ರವರಿ.10) ಭೇಟಿ ನೀಡಿದ ವೇಳೆ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಕುಂಭಮೇಳಕ್ಕೆ ಬರುವ ಭಕ್ತರಿಗೆ ಶ್ರೀ ಗುಂಜಾ ನರಸಿಂಹ ಸ್ವಾಮಿ, ಅಗಸ್ತ್ಯೇಶ್ವರ ಸ್ವಾಮಿ ಹಾಗೂ ಗುಹೇಶ್ವರ ಸ್ವಾಮಿ ದೇವಾಲಯದ ಬಳಿ ಸ್ನಾನದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಜಿಲ್ಲಾಡಳಿತದ ವತಿಯಿಂದ ಸುರಕ್ಷತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಇನ್ನೂ ನಾಳೆ(ಫೆ.11) ನಡೆಯುವ ಕಾವೇರಿ ಆರತಿ ಕಾರ್ಯಕ್ರಮವೂ ಸಂಜೆ 6.30 ರಿಂದ 7 ಗಂಟೆಯವರೆಗೂ ಜರುಗಲಿದ್ದು, ಗಂಗಾ ಆರತಿಯ ರೀತಿಯಲ್ಲಿಯೇ ನಡೆಯಲಿದೆ. ಅದಕ್ಕೆ ಗಂಗಾ ಆರತಿ ಮಾಡುವ ಒಂದು ತಂಡವನ್ನು ಇಲ್ಲಿಗೆ ಕರೆದು ತರಲಾಗಿದೆ. ಹೀಗಾಗಿ ಅವರೇ ಕಾವೇರಿ ಆರತಿ ಮಾಡಲಿದ್ದಾರೆ ಎಂದು ಹೇಳಿದರು.





