ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಹೊರ ಹೊಮ್ಮುತ್ತಿದೆ. ಇಲ್ಲಿಂದ ದೇಶ-ವಿದೇಶಗಳಿಗೆ ತೆರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ಈಗಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ತತ್ಕಾಲ್ ಸೇವೆಯನ್ನೂ ಒಳಗೊಂಡಂತೆ ಪೂರ್ಣ ಪ್ರಮಾಣದ ಕೇಂದ್ರವನ್ನಾಗಿ ಮೇರ್ಲರ್ಜೆಗೇರಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.
ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಮೈಸೂರಿನಲ್ಲಿರುವ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ತತ್ಕಾಲ್ ಸೇವೆಗಳೊಂದಿಗೆ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕಾದ ಅಗತ್ಯವಿದೆ. ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಪಾಸ್‌ಪೋರ್ಟ್ ಕಚೇರಿ ಆವರಣಕ್ಕೆ ಸ್ಥಳಾಂತರಿಸಲು ಮನವಿ ಸಲ್ಲಿಸಲಾಗಿದೆ ಎಂದರು.
ಮೈಸೂರಿನಲ್ಲಿ ಉನ್ನತ ಶಿಕ್ಷಣ, ಐಟಿ ವಲಯ, ಪ್ರವಾಸೋದ್ಯಮ ಮತ್ತು ವಿದೇಶಗಳಲ್ಲಿ ಉದ್ಯೋಗ ಕ್ಷೇತ್ರ ವಿಸ್ತರಣೆಯಾಗಿದೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಪಾಸ್‌ಪೋರ್ಟ್ ಸೇವೆಗಳಿಗೆ ಬೇಡಿಕೆ ತೀವ್ರವಾಗಿದೆ. ಸೀಮಿತ ಸಾಮರ್ಥ್ಯ ಮತ್ತು ತತ್ಕಾಲ್ ಸೇವೆ ಇಲ್ಲದಿರುವುದರಿಂದ ಪ್ರಸ್ತುತ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರವು ಸಾರ್ವಜನಿಕ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ, ಎಲ್ಲದ್ದಕ್ಕೂ ಬೆಂಗಳೂರಿಗೆ ತೆರಳಬೇಕಾದ ಅಗತ್ಯವಿದೆ, ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಕೇಂದ್ರವನ್ನಾಗಿಸಬೇಕಿದೆ ಎಂದು ಮನವರಿಕೆ ಮಾಡಲಾಗಿದೆ ಎಂದು ಸಂಸದರು ಹೇಳಿದ್ದಾರೆ.
ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಸ್ಥಾಪಿಸುವುದರಿಂದ ಈ ಪ್ರದೇಶದ ಜನರಿಗೆ ಸೇವಾ ವಿತರಣೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ಬೆಂಗಳೂರು ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮೇಲೆ ಅವಲಂಬಿತವಾಗುವುದು ಕಡಿಮೆಯಾಗಲಿದೆ ಎಂದು ಯದುವೀರ್ ತಿಳಿಸಿದ್ದಾರೆ.
ಈ ಮನವಿಯನ್ನು ಸ್ವೀಕರಿಸಿದ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ನನ್ನ ಲೋಕಸಭಾ ಕ್ಷೇತ್ರವಾದ ಕೊಡಗಿನಲ್ಲಿ ಪಾಸ್‌ಪೋರ್ಟ್ ಪಡೆಯಬೇಕಾದದವರು ಮೈಸೂರು ಅಥವಾ ಬೆಂಗಳೂರಿಗೆ ತೆರಳಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಮೆಗಾ ಪಾಸ್‌ಪೋರ್ಟ್ ಮೇಳವನ್ನು ಆಯೋಜಿಸಬೇಕು ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗೆ ಮನವಿ ಮಾಡಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು ಅತಿ ಶೀಘ್ರದಲ್ಲೇ ಪಾಸ್‌ಪೋರ್ಟ್ ಮೇಳ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.





