Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೈಸೂರಿನ ನೂತನ ಬಿಷಪ್‌ರಾಗಿ ಫ್ರಾನ್ಸಿಸ್ ಸೆರಾವ್ ನೇಮಕ

Francis Serrao appointed as new Bishop of Mysore

ಮೈಸೂರು: ಮೈಸೂರು ಧರ್ಮ ಕ್ಷೇತ್ರ (ಮೈಸೂರು ಡಯೋಸಿಸ್)ದ ಹೊಸ ಬಿಷಪ್‌ರನ್ನಾಗಿ ಡಾ.ಫ್ರಾನ್ಸಿಸ್ ಸೆರಾವ್ ಅವರನ್ನು ಪೋಪ್ 14ನೇ ಲಿಯೋ ಶುಕ್ರವಾರ ನೇಮಕ ಮಾಡಿದ್ದಾರೆ.

ಜೆಸ್ಯೂಟ್ (ಸೊಸೈಟಿ ಆಫ್ ಜೀಸಸ್)ನವರಾದ ಸೆರಾವ್ ಅವರು, ಪ್ರಸ್ತುತ ಶಿವಮೊಗ್ಗ ಧರ್ಮ ಕ್ಷೇತ್ರದ ಬಿಷಪ್ಪರಾಗಿ ಹಾಗೂ ಕಾನ್ಛರೆನ್ಸ್ ಆಫ್ ಕ್ಯಾಥೋಲಿಕ್ ಬಿಷಪ್ಸ್ ಆಫ್ ಇಂಡಿಯಾದ ಕ್ರೈಸ್ತ ಧರ್ಮದ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಿರು ಪರಿಚಯ
ಆಗಸ್ಟ್ 15, 1959ರಲ್ಲಿ ಮಂಗಳೂರು ಧರ್ಮ ಕ್ಷೇತ್ರದ ಮೂಡುಬಿದಿರೆಯಲ್ಲಿ ಜನಿಸಿದ ಫ್ರಾನ್ಸಿಸ್ ಸೆರಾವ್ ಅವರು, ಜನವರಿ 3, 1979ರಲ್ಲಿ ಬೆಂಗಳೂರಿನ ಮೌಂಟ್ ಸೇಂಟ್ ಜೋಸೆಫ್‌ನಲ್ಲಿ ಸೊಸೈಟಿ ಆಫ್ ಜೀಸಸ್ (ಜೆಸ್ಯೂಟ್)ಅನ್ನು ಸೇರಿದರು. ನಂತರ ಜೆಸ್ಯೂಟ್ ಸಂಸ್ಥೆಗಳಾದ ಚೆನ್ನೈನ ಸತ್ಯ ನಿಲಯಂ ಮತ್ತು ಪುಣೆಯ ಜ್ಞಾನ ದೀಪ ವಿದ್ಯಾಪೀಠದಲ್ಲಿ ತತ್ವಶಾಸ್ತ್ರ ಹಾಗೂ ಧರ್ಮಶಾಸ್ತ್ರ ಅಧ್ಯಯನ ಮಾಡಿದರು. ದಿಲ್ಲಿಯ ವಿದ್ಯಾ ಜ್ಯೋತಿ ಕಾಲೇಜಿನಲ್ಲಿ ಧರ್ಮಶಾಸ್ತ್ರದಲ್ಲಿ ಪ್ರವೀಣತಾ ಪತ್ರ ಪಡೆದರು.

ಏಪ್ರಿಲ್ 30, 1992ರಲ್ಲಿ ಪಾದ್ರಿಯಾಗಿ ದೀಕ್ಷೆ ಪಡೆದ ಫ್ರಾನ್ಸಿಸ್ ಸೆರಾವ್ ಅವರ ಸೇವೆಯು ಸಾಮಾಜಿಕ ಕ್ರಿಯೆ, ಶೈಕ್ಷಣಿಕ ನಾಯಕತ್ವ ಮತ್ತು ಸಮುದಾಯ ರಚನೆಯನ್ನು ವ್ಯಾಪಿಸಿದೆ. ಕಾರವಾರ ಧರ್ಮ ಕ್ಷೇತ್ರದ ಮುಂಡ್‌ಗೋಡ್‌ನಲ್ಲಿ ಪಾದ್ರಿಯಾಗಿ ಸೇವೆಯನ್ನು ಪ್ರಾರಂಭಿಸಿದ ಅವರು, ನಂತರ ಮುಂಡ್‌ಗೋಡ್‌ನ ಲೊಯೊಲಾ ವಿಕಾಸ ಕೇಂದ್ರದಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದರು. ಬಳಿಕ ಬೆಂಗಳೂ ರಿನ ಪ್ರಾದೇಶಿಕ ಥಿಯೊಲೊಗೇಟ್‌ನಲ್ಲಿ ಕಾರ್ಯನಿರ್ವಹಿಸಿದರು.

ತದನಂತರ ಆನೇಕಲ್‌ನಲ್ಲಿರುವ ಸೇಂಟ್ ಜೋಸೆಫ್ ಚರ್ಚ್‌ನ ಪಾದ್ರಿಯಾಗಿ, ವಿಜಯಪುರದಲ್ಲಿರುವ ಜೆಸ್ಯೂಟ್ ಕಮ್ಯುನಿಟಿಯ ಸುಪೀರಿಯರ್ ಆಗಿ ಮತ್ತು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ಆಗಿ ಕಾರ್ಯಭಾರ ನಿರ್ವಹಿಸಿದರು. ಮಾರ್ಚ್ 19, 2014ರಲ್ಲಿ ಶಿವಮೊಗ್ಗ ಧರ್ಮ ಕ್ಷೇತ್ರದ ಬಿಷಪ್‌ರನ್ನಾಗಿ ನೇಮಿಸಲಾಗಿತ್ತು.

ಡಾ.ಫ್ರಾನ್ಸಿಸ್ ಸೆರಾವ್ ಮೈಸೂರು ಧರ್ಮ ಕ್ಷೇತ್ರದ ೯ನೇ ಬಿಷಪ್. 2024ರಲ್ಲಿ ತೆರವಾದ ಈ ಸ್ಥಾನಕ್ಕೆ ಪ್ರೇಷಿತ ಆಡಳಿತ ಅಧಿಕಾರಿಯನ್ನಾಗಿ ಬೆಂಗಳೂರು ಮಹಾಧರ್ಮ ಕ್ಷೇತ್ರದ ನಿವೃತ್ತ ಆರ್ಚ್ ಬಿಷಪ್ ಡಾ.ಬರ್ನಾರ್ಡ್ ಮೊರಾಸ್ ಅವರನ್ನು ನೇಮಿಸಲಾಗಿತ್ತು. ಮೈಸೂರು ಧರ್ಮ ಕ್ಷೇತ್ರವು ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಿದೆ.

ಶುಭ ಹಾರೈಕೆ
ಮೈಸೂರು ಡಯೋಸಿಸ್‌ನ ನೂತನ ಬಿಷಪ್ ಫ್ರಾನ್ಸಿಸ್ ಸೆರಾವ್ ಅವರಿಗೆ ಪ್ರೇಷಿತ ಆಡಳಿತ ಅಧಿಕಾರಿ ಡಾ. ಬರ್ನಾರ್ಡ್ ಮೊರಾಸ್ ಶುಭ ಹಾರೈಸಿದ್ದಾರೆ. ‘ಪ್ರಸ್ತುತ ಶಿವಮೊಗ್ಗ ಬಿಷಪ್ ಆಗಿರುವ ಫ್ರಾನ್ಸಿಸ್ ಸೆರಾವ್ ಅವರನ್ನು ಮೈಸೂರಿನ ಬಿಷಪ್ ಆಗಿ ನೇಮಕ ಮಾಡಲಾಗಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ರೋಮ್‌ನಲ್ಲಿ ಶುಕ್ರವಾರ ಈ ಘೋಷಣೆ ಮಾಡಲಾಗಿದೆ. ನಾವೆಲ್ಲರೂ ಬಿಷಪ್ ಫ್ರಾನ್ಸಿಸ್ ಸೆರಾವ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸೋಣ ಮತ್ತು ಮೈಸೂರು ಡಯಾಸಿಸ್‌ನಲ್ಲಿ ಅವರ ಸೇವೆಯು ಹಲವು ವರ್ಷಗಳ ಕಾಲ ಫಲಪ್ರದವಾಗಲಿ ಎಂದು ಹಾರೈಸೋಣ’ ಎಂದು ಅವರು ತಿಳಿಸಿದ್ದಾರೆ.

Tags:
error: Content is protected !!