ಮೈಸೂರು : ಜಿಲ್ಲೆಯಲ್ಲಿ ಬಾಕಿಯಿರುವ ಅರಣ್ಯ ಹಕ್ಕು ಕಾಯ್ದೆಯ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲು ಕಂದಾಯ ಇಲಾಖೆ, ಸರ್ವೇ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪಿಎಂ ಜನ್ಮನ್ ಹಾಗೂ ಅರಣ್ಯ ಹಕ್ಕು ಕಾಯ್ದೆಯ ಕುರಿತು ಜಿಲ್ಲಾ ಮಟ್ಟದ ಸಭೆ ನಡೆಸಿ ಅವರು ಮಾತನಾಡಿದರು
ಪಿಎಂ ಜನ್ಮನ್ ಯೋಜನೆಯ ಬಗ್ಗೆ ಸಂಬಂಧಿಸಿದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಪಿಎಂ ಜನ್ಮನ್ ಯೋಜನೆಯ ಅಡಿಯಲ್ಲಿ ಇಂಧನ ಇಲಾಖೆ ವತಿಯಿಂದ 18 ಹಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮೊಬೈಲ್ ಮೆಡಿಕಲ್ ಯೂನಿಟ್ ಶೀಘ್ರವಾಗಿ ಕಾರ್ಯನಿರ್ವಹಿಸುವಂತೆ ಹೇಳಿದರು. ಶಿಕ್ಷಣ ಇಲಾಖೆಯ ಮಂಜುರಾಗಿರುವ ವಸತಿ ನಿಲಯದ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಿ ಕಾರ್ಯರಂಭ ಮಾಡಲು ಸೂಚಿಸಿ, ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.
5 ಎಂ ಪಿ ಸಿ ಸೆಂಟರ್ ಗಳು ಮಂಜೂರಾಗಿದ್ದು, ಉಳಿಕೆ 23 ಎಂ ಪಿ ಸಿ ಗಳಿಗೆ ಅಂದಾಜು ಪಟ್ಟಿ ತಯಾರಾಗುತ್ತಿದ್ದು, ಶೀಘ್ರವೇ ಅನುಮೋದನೆಗೆ ಮೇಲಧಿಕಾರಿಗಳಿಗೆ ಕಳಿಸಬೇಕೆಂದು ವಿಡಿವಿಕೆ ಕೇಂದ್ರ ಗಳನ್ನು ನಿಗಧಿತ ಅವಧಿಯೊಳಗೆ ಪ್ರಾರಂಭಿಸಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಗಾಯತ್ರಿ, ನಾಗರಹೊಳೆ ಹುಲಿ ಸಂರಕ್ಷಿತ ವನ್ಯಜೀವಿ ವಲಯದ ನಿರ್ದೇಶಕಿ ಸೀಮಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಧಿಕಾರಿ ಎಂ ಕೆ ಮಲ್ಲೇಶ್, ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಗೂ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.