Mysore
18
clear sky

Social Media

ಗುರುವಾರ, 29 ಜನವರಿ 2026
Light
Dark

ಮೈಸೂರಲ್ಲಿ ಮೊದಲ ಬಾರಿಗೆ ಚಕ್ಕುಲಿ ಕಂಬಳ ಮೇಳ

ಮೈಸೂರು : ಫೋರ್ ಸೀ ಸೆಂಟರ್ ಫಾರ್ ಕಲ್ಚರ್ ಕಮ್ಯುನಿಕೇಷನ್ ಅಂಡ್ ಕ್ರಿಯೇಟಿವಿಟಿ ಸಂಸ್ಥೆ ವತಿಯಿಂದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ, ಮೈಸೂರಿನಲ್ಲಿ ವಾಸಿಸುತ್ತಿರುವ ಮಲೆನಾಡು ಹಾಗೂ ಕರಾವಳಿ ಭಾಗದ ಜನರಿಗಾಗಿ ಮೊದಲ ಬಾರಿಗೆ ಸಾಮೂಹಿಕ ಚಕ್ಕುಲಿ ಕಂಬಳ ಮೇಳ ಆಯೋಜಿಸಲಾಗಿತ್ತು.

ಚಕ್ಕುಲಿ ಕಂಬಳ ಮಲೆನಾಡು ಹಾಗೂ ಕರಾವಳಿ ಭಾಗದ ಅತ್ಯಂತ ಜನಪ್ರಿಯ ಆಚರಣೆಯಾಗಿದೆ. ನಾಗೇಂದ್ರಭಟ್ ಅವರ ಸಾರಥ್ಯದಲ್ಲಿ ಕಂಬಳ ಮೇಳ ನಡೆಯಿತು. ಮೇಳದಲ್ಲಿ ೩೦ಕ್ಕೂ ಹೆಚ್ಚಿನ ಕರಾವಳಿ ಹಾಗೂ ಮಲೆನಾಡಿನ ಭಾಗದ ಮಹಿಳೆಯರು ಭಾಗವಹಿಸಿದ್ದರು. ಮೇಳದಲ್ಲಿ ಸಾಮೂಹಿಕವಾಗಿ ಭಾಗವಹಿಸಿದ ಮಹಿಳೆಯರು ಚಕ್ಕುಲಿ ಮಾಡಿ ಸಂತಸಪಟ್ಟರು.

ಸುಮಾರು ೧೦ ಕೆ.ಜಿ ಅಕ್ಕಿ ಹಿಟ್ಟು ಬಳಸಿ ೫ ಲೀಟರ್ ನಷ್ಟು ಬಿಸಿ ನೀರಿಗೆ ಬೆಣ್ಣೆ, ಸಾಸಿವೆ, ಹೋಮ್ ಕಾಳು ಬೆರಸಿ ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಸೇರಿಸಿ ನೀರು ಕುದಿಸಿ, ನಂತರ ಅಕ್ಕಿ ಹಿಟ್ಟಿಗೆ ಹಾಕಿ ಹದವಾಗಿ ಹಿಟ್ಟನ್ನು ಕಲಸಲಾಯಿತು. ಬಳಿಕ ಅಲ್ಲಿದ್ದ ಮಹಿಳೆಯರು ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಂಡು ಬಾಳೆ ಎಲೆಯ ಮೇಲೆ ಎಣ್ಣೆ ಸವರಿ, ಚಕ್ಕುಲಿಯ ಒಳ್ಳುಗಳಲ್ಲಿ ಹಿಟ್ಟನ್ನು ಹಾಕಿ ವೃತಾಕಾರದಲ್ಲಿ ಚಕ್ಕುಲಿ ಮಾಡಿದರು. ಬಳಿಕ ಎಣ್ಣೆಯಲ್ಲಿ ಚಕ್ಕುಲಿಯನ್ನು ಕರಿದು ಮನೆಗಳಿಗೆ ಕೊಂಡೋಯ್ದರು.

ಪಾರಂಪರಿಕ ಆಚರಣೆ
ಕಾರ್ಯಕ್ರಮ ಆಯೋಜಿಸಿದ್ದ ಸಂಸ್ಥೆಯ ಮುಖ್ಯಸ್ಥೆ ಸಿರಿ ಅವರು ಮೇಳ ಕುರಿತು ಮಾತನಾಡಿ ಚಕ್ಕುಲಿ ಕಂಬಳ ಇದೊಂದು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕಂಡು ಬರುವ ಪ್ರಮುಖ ಆರಚಣೆಯಾಗಿದ್ದು, ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿದೆ. ಚಕ್ಕುಲಿ ಕಂಬಳ ಎಂದರೆ ಗಣೇಶ ಚತುರ್ಥಿ ಅಥವಾ ಚೌತಿ ಹಬ್ಬದ ವಿಶೇಷವಾಗಿದೆ. ಹಬ್ಬಕ್ಕೂ ಒಂದು ವಾರ ಮೊದಲು ಈ ಚಕ್ಕುಲಿ ಕಂಬಳವನ್ನು ಗ್ರಾಮಗಳಲ್ಲಿ ಸಾಮೂಹಿಕವಾಗಿ ಎಲ್ಲರೂ ಒಂದೆಡೆ ಭಾಗವಹಿಸಿ ಚಕ್ಕುಲಿ ತಯಾರಿ ಮನೆಗಳಿಗೆ ತೆಗೆದುಕೊಂಡು ಹೋಗಲಾಗುತ್ತದೆ.

ಚಕ್ಕುಲಿಯನ್ನು ಮೀಸಲಿರಿಸಿ ಚೌತಿ ಹಬ್ಬದ ದಿನದಂದು ಗಣಪತಿಗೆ ನೈವೇದ್ಯಕ್ಕಿರಿಸಲಾಗುತ್ತದೆ ಎಂದರು. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಆಯೋಜಿಸಿದ್ದು ಪಾರಂಪರಿಕ ಆಚರಣೆಯನ್ನು ಮುಂದುವರೆಸಿಕೊಂಡು ಹೋಗುವ ಉದ್ಧೇಶದಿಂದ ಚಕ್ಕುಲಿ ಕಂಬಳ ನಡೆಸಲಾಗುತ್ತಿದೆ ಎಂದು ತಿಳಿಸದರು.

ಸಂಸ್ಥೆಯ ಕಾರ್ಯದರ್ಶಿ ಶ್ರೀವತ್ಸ, ಪ್ರೋ.ನಿರಂಜನ್ ವಾನಳ್ಳಿ, ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!