ಮೈಸೂರು: ನಿನ್ನೆ (ಗುರುವಾರ, ಮೇ.3) ಮೈಸೂರು ಜಿಲ್ಲೆಯಾದ್ಯಂತ ಗುಡುಗು,ಮಿಂಚು ಬಿರುಗಾಳಿ ಸಹಿತ ಆರ್ಭಟಿಸಿದ ಭಾರೀ ಮಳೆಗೆ ನಗರದಾದ್ಯಂತ ಅಪಾರ ಹಾನಿಯಾಗಿದೆ.
ಮೈಸೂರು ನಗರದ ಹಲವು ಭಾಗಗಳಲ್ಲಿ ಆಲಕಲ್ಲು ಸಹಿತ ಮಳೆ ಬಂದಿದೆ. ಜೊತೆಗೆ ಭಾರೀ ಮಳೆಗೆ ಕೂಲಿಂಗ್ ಶೀಟ್ ತಲೆ ಮೇಲೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನ ಆಳನಹಳ್ಳಿಯಲ್ಲಿ ನಡೆದಿದೆ. ಮಾರಶೆಟ್ಟನ ಹಳ್ಳಿಯ 34 ವರ್ಷದ ಶಿವಕುಮಾರ್ ಮೃತರಾದವರು. ಇವರು ಆಲನಹಳ್ಳಿಯಲ್ಲಿ ಕಟ್ಟಡ ಕಾಮಗಾರಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಬಿರುಗಾಳಿ ಸಹಿತ ಬಂದ ಮಳೆಯಿಂದ ಕೂಲಿಂಗ್ ಶೀಟರ್ ತಲೆಮೇಲೆ ಬಿದ್ದು, ಸಾವನ್ನಪ್ಪಿದ್ದಾರೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊದಲ ಮಳೆಗೆ ಧರೆಗುರುಳಿದ ಮರಗಳು: ಇನ್ನು ನಿನ್ನೆ ಸಂಜೆ ಮೈಸೂರು ನಗರದಾದ್ಯಂತ ಸುರಿದ ಭಾರೀ ಮಳೆಗೆ ನಗರದ ಪ್ರಮುಖ ಬೀದಿಗಳಲ್ಲಿನ ಹಳೆಯ ಕಟ್ಟಡಗಳು, ಮರಗಳು ರಸ್ತೆ ಮೇಲೆ ಉರುಳಿರುವ ದೃಶ್ಯ ಕಂಡುಬಂದಿದೆ.
ಕುಕ್ಕರಹಳ್ಳಿ ಕರೆ ಸಮೀಪ ವಿದ್ಯುತ್ ಲೈನ್ ಮೇಲೆ ಮರ ಮುರಿದು ಬಿದ್ದಿದೆ. ಸರಸ್ವತಿ ಪುರಂನ ಫೈರ್ ಬ್ರಿಗೇಡ್ ಬಳಿಯ ಅಂಡರ್‌ಪಾಸ್ ಒಳಗೆ ಮರ ಬಿದ್ದಿದೆ, ಮಹಾರಾಣಿ ಕಾಲೇಜು, ಜೆಎಸ್‌ಎಸ್ ಕಾಲೇಜು ಸರಸ್ವತಿ ಪುರಂ ಭಾಗದಲ್ಲಿ ಮರಗಳು ನೆಲಕ್ಕುರುಳಿದೆ. ಇನ್ನು ಅರಮನೆ ಕೋಟೆ ಮಾರಿಯಮ್ಮ ದೇವಾಲಯ ಆವರಣ ಜಲಾವೃತವಾಗಿದ್ದರೇ, ಮೈಸೂರು ನಗರ ಬಸ್ ನಿಲ್ದಾಣವೂ ಕೂಡಾ ಕೆಲಕಾಲ ಜಲಾವೃತವಾಗಿತ್ತು. ಜೊತೆಗೆ ಮೈಸೂರಿಗೆ ವರ್ಷದ ಮೊದಲ ಮಳೆ ಆಲಿಕಲ್ಲಿನ ಜೊತೆಗೆ ಬಂದಿರುವುದು ವಿಶೇಷವಾಗಿತ್ತು.