Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೊದಲು ಸಿಟಿ ರವಿ ತಮ್ಮ ಪಂಚೆ ಸರಿ ಮಾಡಿಕೊಳ್ಳಲಿ : ಚಲುವರಾಯಸ್ವಾಮಿ ಕಿಡಿ

ಮೈಸೂರು : ಮೊದಲು ಬಿಜೆಪಿ ನಾಯಕ ಸಿಟಿ ರವಿ ತಮ್ಮ ಪಂಚೆ ಸರಿ ಮಾಡಿಕೊಳ್ಳಲಿ. ಚುನಾವಣೆಯಲ್ಲಿ ಈ ರೀತಿ ಮಾತನಾಡಿದ್ದಕ್ಕೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಉತ್ತರವೇ ಅಂತಿಮ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಮೂಲಕ ಮೈಸೂರಲ್ಲಿ ಮಾತನಾಡಿದ ಅವರು, 65 ಸ್ಥಾನಕ್ಕೆ ಕುಸಿದಿರುವ ಅವರಲ್ಲಿ ಕಚ್ಚಾಟ ಇಲ್ವಾ. ನಮ್ಮಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಏನು ಕಿತ್ತಾಡುತ್ತಿದ್ದಾರಾ?

ಸುಮ್ಮನೇ ಅವರೇ ಕಲ್ಪಿಸಿಕೊಂಡು ಮಾತಾನಾಡುತ್ತಾರೆ. ಮನಸ್ಸಿಗೆ ಬಂದಂತೆ ಮಾತನಾಡಿದವರನ್ನು ಜನರು ಮಲಗಿಸಿದ್ದಾರೆ. ಅದರಲ್ಲಿ ಒಬ್ಬರು ಇಬ್ಬರು ಉಳಿದುಕೊಂಡಿದ್ದಾರೆ. ಜನ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ನಮ್ಮ ಪಂಚೆ ಸರಿ ಮಾಡೋದು ಬೇಡ. ಮೊದಲು ಅವರ ಪಂಚೆ ಸರಿ ಮಾಡಿಕೊಳ್ಳೋಕೆ ಹೇಳಿ ಎಂದು ಕಿಡಿಕಾರಿದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಪಂಚೆ ಬಗ್ಗೆ ಮಾತನಾಡಿದ್ದ ಸಿಟಿ ರವಿಗೆ ಚಲುವರಾಯಸ್ವಾಮಿ ಟಾಂಗ್‌ ನೀಡಿದ್ದಾರೆ.

ದಿನ ಬೆಳಗಾದರೆ ಜೆಡಿಎಸ್ ಬಿಜೆಪಿಯವರು ಏನೇನೋ ಮಾತನಾಡಿ ಪ್ರಚಾರ ತೆಗೆದುಕೊಳ್ಳೋಕೆ ನೋಡುತ್ತಾರೆ. ಗ್ಯಾರಂಟಿ ಯೋಜ‌ನೆಗಳು ಜಾರಿ ಆಗೋದೇ ಇಲ್ಲ ಅಂತ ಎರಡೂ ಪಕ್ಷ ಹೋರಾಟ ಮಾಡಿದರು. ದೇಶದ‌ ಇತಿಹಾಸದಲ್ಲೇ ಯಾವುದೇ ಸರ್ಕಾರ ಈ ರೀತಿ ಮಾಡಿದೆಯಾ? ಎಂದು ಪ್ರಶ್ನಿಸಿದ ಅವರು, ಜುಲೈ 4ರಿಂದ ಬಿಎಸ್‌ ಯಡಿಯೂರಪ್ಪ ಧರಣಿ ನಡಿಸಿದರೆ ಸ್ವಾಗತ, ಯಡಿಯೂರಪ್ಪ ಅವರ ಜೊತೆ ಬಸವರಾಜ, ಬೊಮ್ಮಾಯಿ, ಸಾಮ್ರಾಟ್ ಅಶೋಕ್, ಸಿಟಿ ರವಿ ಎಲ್ಲರೂ ಬಂದು ಹೋರಾಟ ಮಾಡಲಿ ಎಂದು ವ್ಯಂಗ್ಯವಾಡಿದರು.

ಐದು ವರ್ಷಗಳೊಗೊಮ್ಮೆ ಸರ್ಕಾರ ಬದಲಾದರೆ ಅಭಿವೃದ್ಧಿ ಅಸಾಧ್ಯ : ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರ ಬದಲಾದರೆ ಅಭಿವೃದ್ಧಿ ಕಾರ್ಯಗಳು ಅಸಾಧ್ಯ‌, ಯಾವುದೇ ಒಂದು ಪಕ್ಷದ ಸರ್ಕಾರ ಹತ್ತು ವರ್ಷ ಅಧಿಕಾರದಲ್ಲಿದ್ದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಲಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾದರೆ ಅಭಿವೃದ್ಧಿಗೆ ಮಾರಕವಾಗಲಿದೆ. ಅದೇ ರೀತಿ ಸಮ್ಮಿಶ್ರ ಸರ್ಕಾರವಿದ್ದರೂ ಸಹ ಅಭಿವೃದ್ಧಿ ಕಾರ್ಯ ಅಸಾಧ್ಯ ಎಂದರು.

ಜಿಲ್ಲಾ ಉಸ್ತುವಾರಿ ಕೂಡ ಐದು ವರ್ಷ ಒಬ್ಬರ ಕೈಯಲ್ಲೇ ಇರಬೇಕು. ಮಂಡ್ಯ ಜಿಲ್ಲೆಗೆ 20 ವರ್ಷಗಳ‌ ಕಾಲ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗಿದ್ದರು. ಪರಿಣಾಮ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಆಗಲಿಲ್ಲ. ಕಳೆದ ಸರ್ಕಾರದ ಅವಧಿಯಲ್ಲಿ ನಾರಾಯಣಗೌಡ ಉಸ್ತುವಾರಿ ಸಚಿವರಾಗಿದ್ದರೂ ಕೂಡ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಲಿಲ್ಲ ಎಂದು ಚಲುವರಾಯಸ್ವಾಮಿ ವಿಶ್ಲೇಷಿಸಿದರು.

ಟೋಲ್‌ ಸಂಗ್ರಹ ಕೇಂದ್ರ ಸರ್ಕಾರದ ಉದ್ಧಟತನದ ನಡೆ : ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ ಎರಡನೇ‌ ಟೋಲ್ ಸಂಗ್ರಹ ಆರಂಭ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಕೇಂದ್ರ ಸರ್ಕಾರದ ಉದ್ಧಟತನವಾಗಿದೆ. ಜನರಿಗೆ ಟೋಲ್ ಕಟ್ಟದಂತೆ ಕರೆ ನೀಡಲಾಗಿದೆ. ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನೇರವಾಗಿ ಪ್ರತಿಭಟನೆಗೆ ಹೋಗುವುದಿಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಟೋಲ್ ಸಮಸ್ಯೆಯ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗಿದೆ. ಈ ಸಂಬಂಧ ನಮ್ಮ ಶಾಸಕರು ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಮಾತನಾಡಿದ್ದಾರೆ ಎಂದು ಹೇಳಿದರು.

ಅಭಿವೃದ್ದಿ ಕಾರ್ಯಗಳಿಗೆ ಕೇಂದ್ರ ಸರ್ಕಾರ ಎಲ್ಲಿಂದಲೋ ಹಣ ತರೋದಿಲ್ಲ. ರಾಜ್ಯ ಸರ್ಕಾರಗಳು ಕಟ್ಟುವ ತೆರಿಗೆಯಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತದೆ. ಹೀಗಿದ್ದರೂ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಾಮಗಾರಿ ಪೂರ್ಣವಾಗದೇ ಟೋಲ್ ಸಂಗ್ರಹ ಮಾಡುವುದು ಬೇಡ ಅಂತ ಹೇಳಿದ್ದೇವೆ. ಹೈವೇಯಲ್ಲಿ ಅಪಘಾತಗಳು ಹೆಚ್ಚುತ್ತಿರುವುದರಿಂದ ಎಡಿಜಿಪಿ ಅಲೋಕ್ ಕುಮಾರ್ ಸ್ಥಳ ಪರಿಶೀಲನೆ ಮಾಡಿದ್ದಾರೆ. ಎಲ್ಲ ಸಮಸ್ಯೆಗಳನ್ನು ಸರಿ ಮಾಡಿಕೊಂಡು ಟೋಲ್ ಸಂಗ್ರಹಿಸಿದರೆ ನಮ್ಮ ಅಡ್ಡಿ ಇಲ್ಲ. ಶೀಘ್ರದಲ್ಲೇ ಇದಕ್ಕೊಂದು ರೆಮಿಡಿ ಕಂಡು ಹಿಡಿಯುತ್ತೇವೆ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ