Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಫ.ಗು ಹಳಕಟ್ಟಿಯವರ ಪಾತ್ರ ಮಹತ್ವವಾದದ್ದು; ಪ್ರೊ.ಎನ್.ಕೆ ಲೋಕನಾಥ್

ಮೈಸೂರು: ವಚನ ಸಾಹಿತ್ಯಗಳ ಸಂರಕ್ಷಣೆಯಲ್ಲಿ ವಚನ ಸಾಹಿತ್ಯದ ಪಿತಾಮಹರೆಂದೇ ಪ್ರಖ್ಯಾತರಾಗಿರುವ ಫ.ಗು ಹಳಕಟ್ಟಿ ಅವರ ಪಾತ್ರ ಮಹತ್ವವಾದದ್ದು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎನ್ ಕೆ ಲೋಕನಾಥ್ ಹೇಳಿದರು.

ಮಂಗಳವಾರ(ಜು.2) ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ ಎಂ ಶ್ರೀ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ.ಫ.ಗು ಹಳಕಟ್ಟಿಯವರ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ-2024 ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ತಾಳೆಗರಿಯ ಸ್ವರೂಪದಲ್ಲಿದ್ದ ವಚನ ಸಾಹಿತ್ಯವನ್ನು ಮುದ್ರಣಕ್ಕೆ ಒಳಪಡಿಸಿ ಗ್ರಂಥ ರೂಪದಲ್ಲಿ ಕನ್ನಡಿಗರಿಗೆ ಧಕ್ಕಿಸಿದ ಕೀರ್ತಿ ಫ.ಗು ಹಳಕಟ್ಟಿಯವರಿಗೆ ಸಲ್ಲಬೇಕು. ಇವರು ವಚನ ಸಾಹಿತ್ಯದಲ್ಲಿ ಮಾತ್ರವಲ್ಲದೆ ವಕೀಲರಾಗಿ ಜನ ಸಾಮಾನ್ಯರಿಗೆ ಸಹಾಯ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ ಎಂದರು.

ತಮ್ಮ ವಿದ್ಯಾರ್ಥಿ ದಿನಗಳಿಂದಲೂ ಜನರೊಂದಿಗೆ ಒಡನಾಟವನ್ನಿಟ್ಟುಕೊಂಡಿದ್ದ ಫ.ಗು ಹಳಕಟ್ಟಿಯವರು ತಾವು ಬೆಳೆದು ವೃತ್ತಿಯನ್ನು ಪಡೆದ ನಂತರ ತಮಗೆ ಬರುತ್ತಿದ್ದ ಹಣದಲ್ಲಿ ಬಡಜನರಿಗೆ ಸಹಾಯ ಮಾಡುತ್ತಿದ್ದರು. ಹಳಗಟ್ಟಿಯವರ ಸ್ವಾರ್ಥ ತ್ಯಾಗ, ಸಹೋದರ ಭಾವ, ಸಮದೃಷ್ಟಿ, ದುಡಿದು ತಿನ್ನುವ ಹಟ, ಸತ್ಯ ಪರಿಪಾಲನೆ ಮುಂತಾದ ಸದ್ಗುಣಗಳು ಹಾಗೂ ಅವರ ತತ್ವಗಳನ್ನು ಇಂದಿನ ಪೀಳಿಗೆಗಳು ಅಳವಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನ್ನಡದ ವಚನ ಸಾಹಿತ್ಯಗಳನ್ನು ಹುಡುಕಿ ತೆಗೆದು ಪ್ರತಿಯೊಂದನ್ನು ಒಂದೆಡೆ ಸೇರಿಸಿ “ವಚನಸಾರ” ಎಂಬ ಹೆಸರನ್ನಿಟ್ಟು ಆ ಗ್ರಂಥದ ಪ್ರಕಟಣೆಯಿಂದ ಆರಂಭವಾದ ವಚನ ಸಾಹಿತ್ಯ ಇಂದು ಕನ್ನಡ ನಾಡಿನಲ್ಲಿ ಒಂದು ಕ್ರಾಂತಿಯನ್ನೇ ತಾಳಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎನ್ ಕೆ ಲೋಲಾಕ್ಷಿ, ಇಡೀ ವಚನ ಸಾಹಿತ್ಯಕ್ಕೆ ಪ್ರಮುಖವಾಗಿ ಮೂರು ಘಟಕಗಳಿವೆ. ಅದರಲ್ಲಿ ವಚನವನ್ನು ಸೃಷ್ಟಿ ಮಾಡಿದ ಘಟ್ಟ, ವಚನವನ್ನು ಸಂರಕ್ಷಣೆ ಮಾಡಿದ ಘಟ್ಟ ಹಾಗೂ ವಚನ ಸಾಹಿತ್ಯವನ್ನು ಓದಿ ಬದುಕುತ್ತಿರುವ ನಮ್ಮ ಸಮಕಾಲಿನ ಕಾಲಘಟ್ಟ ಈ ಮೂರು ಕಾಲ ಘಟ್ಟವನ್ನು ಹೋಲಿಸಿ ನೋಡಿದಾಗ ವಚನ ಸಂರಕ್ಷಣಾ ಘಟ್ಟ ಪ್ರಮುಖವಾಗಿದೆ. ಅಂದು ವಚನಗಳು ಸಂರಕ್ಷಿಸಲ್ಪಟ್ಟಿರದಿದ್ದರೆ ಇಂದು ಯಾರೊಬ್ಬರೂ ವಚನಗಳನ್ನು ಓದಲು ಅದರ ಬಗ್ಗೆ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಫ.ಗು ಹಳಕಟ್ಟಿಯವರು ಇಂದಿಗೂ ಅಮರ ಎಂದರು.

ವಚನ ಸಾಹಿತ್ಯದ ಇತಿಹಾಸದಲ್ಲಿ 12 ನೇ ಶತಮಾನದಲ್ಲಿ ಬಸವಣ್ಣನವರು ಪ್ರಪಂಚದಾದ್ಯoತ ಜಾಗತಿಕ ಕ್ರಾಂತಿಯನ್ನು ಮಾಡಿದ್ದರು. ಆದರೆ ವಚನಗಳು ಕನ್ನಡ ಭಾಷೆಯಲ್ಲಿ ಇದ್ದ ಕಾರಣ ಜಾಗತಿಕ ಕ್ರಾಂತಿಯನ್ನು ಯಶಸ್ವಿಗೊಳಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ವಚನ ಚಳುವಳಿಯ ಮೂಲಕ ಅಂದಿನ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತಿದ್ದರು. ಹಾಗಾಗಿ ಪ್ರಪಂಚಕ್ಕೆ ಕಾಯಕ ಚಳುವಳಿಯನ್ನು ನೀಡಿದಂತಹ ಕೀರ್ತಿ ನಮ್ಮ ಕನ್ನಡ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದರು.

ಇoಗ್ಲೆoಡ್ ನಂತಹ ದೇಶದಲ್ಲಿ ಇಂದು ನಾವು ಬಸವಣ್ಣನವರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಜಗತ್ತಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುತ್ತಿದ್ದೇವೆ. ಅವರು ಅಂತರ್ಜಾತಿಯ ವಿವಾಹದ ಮೂಲಕ ಮಾಡಿದ ಕ್ರಾಂತಿ ಇಂದಿಗೂ ಪ್ರಪಂಚದ ಅತ್ಯಂತ ತಲ್ಲಣವನ್ನು ಉಂಟುಮಾಡಿತ್ತು. ಇದರಿಂದ ಎಷ್ಟೋ ವಚನಗಳು ಹಾಗೂ ವಚನಗಾರರು ಬಲಿಯಾದರು. ಈ ಸಂದರ್ಭದಲ್ಲಿ ಉಳಿದುಕೊಂಡoತಹ ವಚನಗಳನ್ನು ಸಂರಕ್ಷಿಸುವ ಕೆಲಸವನ್ನು ಫ.ಗು ಹಳಕಟ್ಟಿ ಮತ್ತು ಸಂಗಡಿಗರು ಮಾಡುವ ಮೂಲಕ ಇಂದಿನ ಪೀಳಿಗೆಗಳು ವಚನದ ಮಹತ್ವವನ್ನು ತಿಳಿಯುವಂತೆ ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಡಿ ಸುದರ್ಶನ್, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಂಗದ ನಿರ್ದೇಶಕರಾದ ಪ್ರೊ. ನಂಜಯ್ಯ ಹೊಂಗನೂರು, ಮೈಸೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಸಿ ನಾಗಣ್ಣ ಹಾಗೂ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ.ಸಬಿತಾ ಬನ್ನಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: