Mysore
20
overcast clouds
Light
Dark

ಮೈಸೂರು – ಧಾರವಾಡ ಎಕ್ಸ್‌ಪ್ರೆಸ್‌ ಬೆಳಗಾವಿಗೆ ವಿಸ್ತರಣೆ : ಆದೇಶ ಹೊರಡಿಸಿದ ರೈಲ್ವೆ ಸಚಿವಾಲಯ

ಮೈಸೂರು : ಮೈಸೂರು-ಬೆಳಗಾವಿ ಭಾಗದ ಜನಪ್ರತಿನಿಧಿಗಳು, ಸಾರ್ವಜನಿಕರ ಮನವಿಗೆ ಫಲ ಸಿಕ್ಕಿದೆ. ಮೈಸೂರು ಮತ್ತು ಧಾರವಾಡ ನಿಲ್ದಾಗಳ ನಡುವೆ ಸಂಚರಿಸುತ್ತಿದ್ದ ದೈನಂದಿನ ಎಕ್ಸ್‌ಪ್ರೆಸ್ (17301/02) ರೈಲುಗಳನ್ನು ಬೆಳಗಾವಿ ನಿಲ್ದಾಣದವರೆಗೆ ವಿಸ್ತರಿಸಿ ರೈಲ್ವೆ ಸಚಿವಾಲಯವು ಆದೇಶ ಹೊರಡಿಸಿದೆ.

ಸೆಪ್ಟೆಂಬರ್ 26 ರಿಂದ ಮೈಸೂರಿನಿಂದ ಬೆಳಗಾವಿವರೆಗೆ ರೈಲು ಸಂಚಾರ ಆರಂಭವಾಗಲಿದೆ. ಇದರಿಂದ ಮೈಸೂರು ಮತ್ತು ಬೆಳಗಾವಿ ನಡುವಿನ ಸಂಚಾರ ಮತ್ತಷ್ಟು ಸುಲಭವಾಗಲಿದೆ. ರಾಜ್ಯಸಭಾ ಸಂಸದ ಈರಣ್ಣ ಕರಡಿ ಅವರು ಈ ವಿಚಾರವನ್ನು ಮೊದಲೇ ತಿಳಿಸಿದ್ದರು, ಸೆಪ್ಟೆಂಬರ್ 19ರಂದು ಈ ಬಗ್ಗೆ ಅಧಿಕೃತ ಆದೇಶ ಬಂದಿದ್ದು, ರೈಲು ಸೇವೆಗೆ ಮುಹೂರ್ತ ನಿಗದಿಯಾಗಿದೆ.

ಇತ್ತೀಚೆಗೆ ಪ್ರಯಾಣಿಕರ ಬೇಡಿಕೆ, ವಿವಿಧ ಕಾರಣಗಳಿಗಾಗಿ ರೈಲು ಸಂಖ್ಯೆ 17302 ಧಾರವಾಡ-ಮೈಸೂರು ನಡುವಿನ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿತ್ತು. ಸೆಪ್ಟೆಂಬರ್ 26ರಿಂದಲೇ ಈ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ.

ಈಗ ವೇಳಾಪಟ್ಟಿ ಬದಲಾವಣೆ ಜೊತೆಗೆ ಬೆಳಗಾವಿವರೆಗೆ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ. ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ನೀಡಲಿದೆ.

17301 ಸಂಖ್ಯೆಯ ರೈಲು ರಾತ್ರಿ 10.30ಕ್ಕೆ ಮೈಸೂರು ರೈಲು ನಿಲ್ದಾಣದಿಂದ ಹೊರಡಲಿದೆ. ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ, ಯಲವಿಗಿ, ಹುಬ್ಬಳ್ಳಿ, ಧಾರವಾಡ ತಲುಪಲಿದೆ. ಸದ್ಯ ಬೆಳಗ್ಗೆ 8 ಗಂಟೆಗೆ ಧಾರವಾಡ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಸೆಪ್ಟೆಂಬರ್ 26ರಿಂದ ಬೆಳಗ್ಗೆ 7.38ಕ್ಕೆ ಧಾರವಾಡ ರೈಲು ನಿಲ್ದಾಣಕ್ಕೆ ಬರಲಿದೆ. 7.40ಕ್ಕೆ ಧಾರವಾಡದಿಂದ ಬೆಳಗಾವಿಗೆ ಹೊರಡಲಿದೆ. ಬೆಳಗ್ಗೆ 10.45 ಗಂಟೆಗೆ ಬೆಳಗಾವಿ ರೈಲು ನಿಲ್ದಾಣ ತಲುಪಲಿದೆ.

17302 ಸಂಖ್ಯೆಯ ರೈಲು ರಾತ್ರಿ 8 ಗಂಟೆಗೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಡಲಿದ್ದು ಮರುದಿನ ಬೆಳಗ್ಗೆ 7.10 ಗಂಟೆಗೆ ಮೈಸೂರು ನಿಲ್ದಾಣವನ್ನು ತಲುಪಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮೈಸೂರು-ಬೆಳಗಾವಿ ರೈಲು ಓಡಾಟದಿಂದ ಎರಡೂ ಜಿಲ್ಲೆಗಳ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ. ಅಲ್ಲದೆ ಎರಡೂ ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಕೂಡ ಭಾರಿ ಉತ್ತೇಜನ ಸಿಕ್ಕಂತಾಗುತ್ತದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ