Mysore
20
overcast clouds
Light
Dark

ದೇಶದ ಪ್ರಧಾನಿ ಆಗುವ ಅರ್ಹತೆ ಮೋದಿ ಬಿಟ್ಟರೆ ಇನ್ಯಾರಿಗೂ ಇಲ್ಲ: ಜಿಟಿಡಿ

21 ನೇ ಶತಮಾನದ ಆಧುನಿಕ ಯುಗದಲ್ಲಿ ದೇಶದ ಏಕತೆ, ಅಖಂಡತೆ, ದೇಶದ ರಕ್ಷಣೆ ಮತ್ತು ಅಭಿವೃದ್ಧಿಗೆ ಮೋದಿ ಅವರಿಂದಲೇ ಸಾಧ್ಯ. ಇನ್ಯಾರೂ ಅವರಿಗೆ ಸಮಾನರಲ್ಲ, ಅವರನ್ನು ಮತ್ತೆ ಪ್ರಧಾನಿಯಾಗಿಸುವ ಒಂದೇ ಒಂದು ಗುರಿ ಬಿಟ್ಟರೆ ಬೇರೇನೂ ಇಲ್ಲ ಎಂದು ಮೈಸೂರಿನಲ್ಲಿ ಜೆಡಿಎಸ್‌ ಮುಖಂಡ ಜಿಟಿ ದೇವೇಗೌಡ ತಿಳಿಸಿದ್ದಾರೆ.

ನಮಗೆ ಎಷ್ಟು ಸ್ಥಾನ ಬೇಕು ಬೇಡ ಅನ್ನೋದು ಮುಖ್ಯ ಅಲ್ಲ ಈ ರಾಷ್ಟ್ರಕ್ಕೆ ಮೋದಿ ಅವರ ನೇತೃತ್ವ ಬೇಕು. ಅದಕ್ಕಾಗಿ ನಾವು ನಮಗೆ ಇಷ್ಟು ಸೀಟು ಬೇಕು ಬೇಡ ಅಂತ ಬೇಡಿಕೆ ಇಟ್ಟಿಲ್ಲ. ಈಗಾಗಲೇ 5 ಕ್ಷೇತ್ರಗಳನ್ನು ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದಾರೆ.

ನಮ್ಮ ಪಕ್ಷ ಎಲ್ಲೆಲ್ಲಿ ಶಕ್ತಿಯುತವಾಗಿದೆ ಅಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ. ಗೆಲ್ಲುವ ಪ್ರಯತ್ನ ಮಾಡಿ ಮೋದಿ ಅವರನ್ನು ಪ್ರಧಾನಿ ಮಾಡುವುದು ನಮ್ಮ ಏಕೈಕ ಗುರಿ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಜಿಟಿ ದೇವೇಗೌಡ ಹೇಳಿಕೆ ನೀಡಿದ್ದಾರೆ.

ಇನ್ನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಜಾತ್ಯಾತೀತವಾಗಿ ಉಳಿದಿಲ್ಲ ಎಂಬ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಶಾಸಕ ಜಿ ಟಿ ದೇವೇಗೌಡ ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಜೊತೆ ಕುರುಬರು ಮಾತ್ರ ಇರೋದು, ದೇವೇಗೌಡರ ಜೊತೆ ಒಕ್ಕಲಿಗರು ಮಾತ್ರ ಇರೋದು, ಯಡಿಯೂರಪ್ಪ ಜೊತೆ ಲಿಂಗಾಯತರು ಮಾತ್ರ ಇರೋದು, ಮಲ್ಲಿಕಾರ್ಜುನಖರ್ಗೆ ಜೊತೆ ದಲಿತರು ಮಾತ್ರ ಇರೋದು ಅಂದ್ರೇ ಜಾತ್ಯಾತೀತಾನ. ಜಾತ್ಯಾತೀತ ಅಂದರೆ ಏನು? ಎಂದು ಜಾತ್ಯಾತೀತ ಪದದ ಕುರಿತು ಶಾಸಕ ಜಿ ಟಿ ದೇವೇಗೌಡ ಹರಿಹಾಯ್ದರು.

ಅಲ್ಲದೇ ರಾಜ್ಯ ಸರ್ಕಾರ ವಿಫಲತೆ ಕಂಡಿದೆ ಎಂದೂ ಸಹ ಕಿಡಿಕಾರಿದ ಜಿಡಿ ದೇವೇಗೌಡ ರಾಜ್ಯದಲ್ಲಿ ಬರ ಪರಿಹಾರವನ್ನು ರೈತರಿಗೆ ಕೊಡುವ ವಿಚಾರದಲ್ಲೂ ಸರ್ಕಾರ ವಿಫಲವಾಗಿದೆ. ಇತ್ತ ಇವರ ಗ್ಯಾರಂಟಿಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ, ಜನ‌ ಹಿಡಿ ಶಾಪ ಹಾಕುತ್ತಿದ್ದಾರೆ, ಇದನ್ನು ಸರ್ಕಾರ ಅಂತ ಕರೆಯಲು ಸಾಧ್ಯವಿಲ್ಲ ಎಂದು ಜಿಟಿಡಿ ಕುಟುಕಿದರು.

ಈಗಾಗಲೇ ಬರಗಾಲದಿಂದ 48 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ,38 ಸಾವಿರ ಕೋಟಿ ಬೆಳೆ ಪರಿಹಾರ ಕೊಡಬೇಕು ಅಂತ ಹೇಳುತ್ತಾರೆ. ರೈತರಿಗೆ ಮೊದಲ ಹಂತದಲ್ಲಿ 2 ಸಾವಿರ ಕೊಡುತ್ತೇವೆ ಎಂದು ಈಗ ತಂತ್ರಾಂಶದ ಸಮಸ್ಯೆಯಿಂದ ತಡವಾಗಿದೆ ಎಂದು ಸಬೂಬು ಹೇಳುತ್ತಾರೆ ಇದನ್ನು ಸರ್ಕಾರ ಅಂತ ಕರೆಯಲು ನಾಚಿಕೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ, ಶಾಸಕ ಜಿಟಿಡಿ ವಾಗ್ದಾಳಿ ನಡೆಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ