Mysore
24
scattered clouds

Social Media

ಸೋಮವಾರ, 30 ಡಿಸೆಂಬರ್ 2024
Light
Dark

ವಿದ್ಯುತ್ ಸರಬರಾಜು ನಿಗಮದ ಸಿಬ್ಬಂದಿ ನಿರ್ಲಕ್ಷ್ಯ : ಬಾಲಕನಿಗೆ ಶಾಕ್‌ !

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಕುವೆಂಪುನಗರ ಬಸ್ ತಂಗುದಾಣದ ಕಬ್ಬಿಣದ ಪೈಪ್‌ನಲ್ಲಿ ವಿದ್ಯುತ್ ಪ್ರವಹಿಸಿ, ಅದನ್ನು ಮುಟ್ಟಿದ ಬಾಲಕ ಕೆಲಕಾಲ ಪೋಷಕರನ್ನು ಆತಂಕಕ್ಕೆ ದೂಡಿದ ಘಟನೆ ನಡೆದಿದೆ.

ಕುವೆಂಪುನಗರ ಕೆಎಚ್‌ಬಿ ಕಾಂಪ್ಲೆಕ್ಸ್ ಮುಂಭಾಗದಲ್ಲಿರುವ ಬಸ್ ತಂಗುದಾಣದಲ್ಲಿ ಬಸ್‌ಗಳ ವಾರ್ಗಗಳನ್ನು ತಿಳಿಸಲು ಅಳವಡಿಸಲಾಗಿರುವ ಸೈನ್ ಬೋರ್ಡ್‌ಗೆ ಪಕ್ಕದಲ್ಲಿಯೇ ಇರುವ ವಿದ್ಯುತ್ ಕಂಬದಿಂದ ಸಂಪರ್ಕ ಪಡೆಯಲಾಗಿದೆ. ತಂಗುದಾಣದ ಕಬ್ಬಿಣದ ಪೈಪ್‌ಗೆ ವಿದ್ಯುತ್ ವೈರ್ ಸುತ್ತಲಾಗಿದೆ.

ವಿದ್ಯುತ್ ಸೋರಿಕೆಯಿಂದ ಪೈಪ್‌ನಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ವೈರ್ ಅಳವಡಿಸಿರುವುದರಿಂದ ಈಗಾಗಲೇ ಹಲವು ಮಂದಿ ಪೈಪ್ ಮುಟ್ಟಿ ವಿದ್ಯುತ್ ಶಾಕ್‌ಗೆ ಒಳಗಾಗಿದ್ದಾರೆ. ಕೂರ್ಗಳ್ಳಿ ನಿವಾಸಿ ಗುರುರಾಜ್ ಎಂಬವರು ತಮ್ಮ ಮಗ ಧನ್ವಿತ್‌ನನ್ನು ನಟನ ರಂಗಶಾಲೆಗೆ ಸೇರಿಸಲು ಕರೆತಂದಿದ್ದರು. ಮಗನ ಫೋಟೋ ಬೇಕಾದ ಕಾರಣ ಕಾಂಪ್ಲೆಕ್ಸ್ ಬಳಿ ಕಾರನ್ನು ನಿಲ್ಲಿಸಿ ತೆರಳಿದ್ದರು.

ಈ ವೇಳೆ ಕಾರಿನಿಂದ ಇಳಿದು ಬಸ್ ತಂಗುದಾಣದ ಬಳಿಗೆ ಬಂದ ಬಾಲಕ ಕಬ್ಬಿಣದ ಪೈಪನ್ನು ಮುಟ್ಟಿದ್ದಾನೆ. ಇದರಿಂದ ಆತನಿಗೆ ವಿದ್ಯುತ್ ಪ್ರವಹಿಸಿದೆ. ಇದರಿಂದ ಆತ ಕೆಲ ನಿಮಿಷಗಳ ಕಾಲ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ.

ಕೂಡಲೇ ಸ್ಥಳೀುಂರು ಧಾವಿಸಿ ಆತನನ್ನು ರಕ್ಷಿಸಿದ್ದಾರೆ. ಬಾಲಕನ ತಂದೆ ಗುರುರಾಜ್ ಅವರು ಮಗನನ್ನು ಆಸ್ಪತ್ರೆಗೆ ಕರೆದೋ್ಂದುು ಚಿಕಿತ್ಸೆ ಕೊಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಆಗಾಗ್ಗೆ ತಂಗುದಾಣದ ಪೈಪ್ ಮುಟ್ಟಿ ಸಾಕಷ್ಟು ಮಂದಿ ಶಾಕ್‌ಗೆ ಒಳಗಾಗಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ಈಗಲಾದರೂ ಸೆಸ್ಕ್ ಸಿಬ್ಬಂದಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: