ಮೈಸೂರು : ನಿಮ್ಮ ಖಾತೆಯಲ್ಲಿ ಮನಿ ಲ್ಯಾಂಡ್ರಿಂಗ್ ನಡೆದಿದೆ. ಪಿಎಫ್‌ಐ ಸಂಘಟನೆಯಿಂದ ನಿಮ್ಮ ಖಾತೆಗೆ ಎರಡೂವರೆ ಕೋಟಿ ರೂ. ಜಮಾ ಆಗಿದೆ ಎಂದು ಬೆದರಿಸಿ ನಗರದ ವೃದ್ಧೆಯೊಬ್ಬರಿಂದ 37.82 ಲಕ್ಷ ರೂ. ಲಪಟಾಯಿಸಿರುವ ಘಟನೆ ನಡೆದಿದೆ.
ಜೆ.ಪಿ.ನಗರ ನಿವಾಸಿಯಾದ 73 ವರ್ಷದ ಮಹಿಳೆಗೆ ಜು.12 ರಂದು ವಾಟ್ಸಾಪ್ ಸಂದೇಶ ಕಳುಹಿಸಿ, ಕೆಲವೇ ಕ್ಷಣಗಳಲ್ಲಿ ವಾಟ್ಸಾಪ್ ವಿಡಿಯೋ ಕರೆ ಮಾಡಿದ ವಂಚಕರು, ಮುಂಬೈನಲ್ಲಿರುವ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಯೂನಿಟ್‌ನಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾರೆ.
ಸಮವಸ್ತ್ರದಲ್ಲಿದ್ದ ವ್ಯಕ್ತಿ ವಿಡಿಯೋ ಕರೆಯಲ್ಲಿ ಮಾತನಾಡಿದ್ದರಿಂದ ಮಹಿಳೆ ನಂಬಿದ್ದಾರೆ. ಕರೆ ಮಾಡಿದ ಕಾರಣ ಕೇಳಿದಾಗ ಪ್ರಕರಣವೊಂದರ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಡೀಟೆಲ್ಸ್ ಫೋಟೋಗಳನ್ನು ಕಳುಹಿಸುವಂತೆ ತಿಳಿಸಿದ್ದಾರೆ.
ವಂಚಕರ ಮಾತು ನಂಬಿದ ಮಹಿಳೆ, ಅವರು ಕೇಳಿದ್ದ ದಾಖಲೆಗಳ ಫೋಟೋ ಕಳುಹಿಸಿದ್ದಾರೆ. ಕೆಲಹೊತ್ತು ಪರಿಶೀಲನೆ ನಾಟಕವಾಡಿದ ವಂಚಕರು, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ದು, ಖಾತೆಯನ್ನು ಮನಿ ಲ್ಯಾಂಡ್ರಿಂಗ್‌ಗಾಗಿ ವ್ಯಕ್ತಿಯೊಬ್ಬರಿಗೆ ನೀಡಲಾಗಿದೆ.
ಟೆರರಿಸಂ ಫಂಡ್‌ಗೆ ಹಣ ಬಳಸಿಕೊಳ್ಳಲು ನಿಮ್ಮ ಖಾತೆಗೆ ಪಿಎಫ್‌ಐನಿಂದ ಎರಡೂವರೆ ಕೋಟಿ ರೂ.ಹಣ ಬಂದಿದೆ ಎಂದಿದ್ದಾರೆ. ಇದರಿಂದ ಭಯಗೊಂಡ ಮಹಿಳೆ, ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಪರಿಪರಿಯಾಗಿ ಹೇಳಿದರೂ ಕೇಳದ ವಂಚಕರು, ನಿಮ್ಮ ಮೇಲೆ ಕೇಸ್ ದಾಖಲಾಗಿದ್ದು, ಅರೆಸ್ಟ್ ವಾರೆಂಟ್ ಕೂಡ ಜಾರಿ ಯಾಗಿದೆ ಎಂದು ಹೇಳಿ ಮತ್ತಷ್ಟು ಹೆದರಿಸಿದ್ದಾರೆ.
ಮಹಿಳೆ ಆತಂಕಗೊಂಡು ದಿಕ್ಕು ತೋಚದ್ದನ್ನು ಗಮನಿಸಿದ ವಂಚಕರು ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ವರ್ಗಾವಣೆ ಮಾಡಿದರೆ ವಾಪಸ್ ಜಮೆ ಮಾಡುತ್ತೇವೆ ಎಂದಿದ್ದಾರೆ. ಗಾಬರಿಯಲ್ಲಿದ್ದ ಮಹಿಳೆ ಜು.15, 19, 24 ರಂದು ಹಂತ ಹಂತವಾಗಿ ಒಟ್ಟು 37.82 ಲಕ್ಷ ರೂ. ಜಮೆ ಮಾಡಿ, ಮೋಸ ಹೋಗಿದ್ದಾರೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.





