ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಇಂದು ಅರಮನೆಗೆ ಗಜಪಡೆಯ 2ನೇ ತಂಡ ಆಗಮಿಸಿವೆ.
ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಲು ಅರಮನೆಗೆ 2ನೇ ತಂಡದ ಗಜಪಡೆ ಮೈಸೂರು ಅರಮನೆಗೆ ಆಗಮಿಸಿದ್ದು, ಅರಮನೆಯಲ್ಲಿ ಇಂದು ಸಂಜೆ ವೇಳೆಗೆ ಮಹೇಂದ್ರ ನೇತೃತ್ವದ ಐದು ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.
ಮತ್ತಿಗೋಡು ಆನೆ ಶಿಬಿರದಿಂದ ಮಹೇಂದ್ರ, ದುಬಾರೆ ಶಿಬಿರದಿಂದ ಪ್ರಶಾಂತ, ಸುಗ್ರೀವ, ರಾಮಂಪುರ ಶಿಬಿರದಿಂದ ಲಕ್ಷ್ಮಿ ಹಾಗೂ ಹಿರಣ್ಯ ಆನೆಗಳು ಅರಮನೆಗೆ ಆಗಮಿಸಿದವು.

ಈಗಾಗಲೇ ಅಂಬಾರಿ ಹೊರುವ ಆನೆ ಅಭಿಮನ್ಯು ನೇತೃತ್ವದ ಮೊದಲ ತಂಡದ ಭೀಮ, ಧನಂಜಯ, ಗೋಪಿ, ವರಲಕ್ಷ್ಮಿ, ಲಕ್ಷ್ಮಿ, ಕಂಜನ್, ರೋಹಿತ್ ಹಾಗೂ ಏಕಲವ್ಯ ಆನೆಗಳು ಅರಮನೆಯಲ್ಲಿ ಬೀಡುಬಿಟ್ಟಿದ್ದು, ನಗರದ ವಾತಾವರಣಕ್ಕೆ ಹೊಂದಿಕೊಂಡಿವೆ.
ದಸರಾ ಗಜಪಡೆಗೆ ದಿನನಿತ್ಯ ತಾಲೀಮು ನಡೆಸಲಾಗುತ್ತಿದ್ದು, ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಮ್‌ಗೆ ನಿತ್ಯ ಅರಮನೆಯಿಂದ ಬನ್ನಿಮಂಟಪದವರೆಗೆ ನಡಿಗೆ ಹಾಗೂ ಭಾರ ಹೊರುವ ತಾಲೀಮು ನಡೆಸಲಾಗುತ್ತಿದೆ.
ಇಂದು ದಸರಾ ಗಜಪಡೆಯ ಎರಡನೇ ತಂಡ ಆಗಮಿಸಿದ್ದು, ಅವುಗಳು ಕೂಡ ತಾಲೀಮಿನಲ್ಲಿ ಭಾಗಿಯಾಗಲಿವೆ. ನಾಳೆ ದಸರಾ ಗಜಪಡೆಯ 14 ಆನೆಗಳು ಕೂಡ ತಾಲೀಮಿನಲ್ಲಿ ಭಾಗಿಯಾಗಲಿವೆ ಎಂಬ ಮಾಹಿತಿ ಲಭ್ಯವಾಗಿದೆ.



