ಮೈಸೂರು: ಬೇಸಿಗೆ ಆರಂಭವಾಗುತ್ತಿದ್ದಂರೆ ನಾಗರಹೊಳೆ ಅಭಯಾರಣ್ಯದಲ್ಲಿ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ಅರಣ್ಯದಲ್ಲಿರುವ ಕೆರೆ ಕಟ್ಟೆಗಳು ಸಂಪೂರ್ಣ ಭತ್ತಿ ಹೋಗಿದ್ದು, ಕಾಡು ಪ್ರಾಣಿಗಳು ಕುಡಿಯಲು ನೀರಿಲ್ಲದೇ ಪರದಾಟ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಭತ್ತಿದ ಕೆರೆ ಕಟ್ಟೆಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ನಾಗರಹೊಳೆ ಅಭಯಾರಣ್ಯದಲ್ಲಿ ಸರಿಸುಮಾರು 256 ಕೆರೆಗಳಿದ್ದು, ಅದರಲ್ಲಿ 27 ಕೆರೆಗಳಿಗೆ ಸೋಲಾರ್ ಪಂಪ್ ಮೂಲಕ ನೀರನ್ನು ಸಪ್ಲೈ ಮಾಡಲಾಗುತ್ತಿದೆ. ಈ ಮೂಲಕ ನೀರನ್ನು ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುವುದನ್ನು ತಪ್ಪಿಸಲು ಅರಣ್ಯ ಇಲಾಖೆ ದಿಟ್ಟ ಕ್ರಮ ಕೈಗೊಂಡಿದೆ.
ಒಟ್ಟಾರೆಯಾಗಿ ಬೇಸಿಗೆ ಆರಂಭವಾಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡಿಗೆ ನೀರು ಪೂರೈಕೆ ಹಾಗೂ ಕಾಡ್ಗಿಚ್ಚು ತಡೆ ಕೆಲಸ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಮುಂಗಾರು ಮಳೆ ಬೀಳುವವರೆಗೂ ಇದೇ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.





