Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕರ್ನಾಟಕದ ಜನತೆ ಬಿಜೆಪಿ ನಾಯಕರ ಆಶ್ವಾಸನೆಯನ್ನು ನಂಬಬಾರದು: ಪುಷ್ಪ ಅಮರನಾಥ್‌

ಮೈಸೂರು: ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ “ನಾರಿ ನ್ಯಾಯ” ಐದು ಗ್ಯಾರಂಟಿಗಳನ್ನು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಅವರು ನಾರಿ ನ್ಯಾಯ್‌ ಗ್ಯಾರೆಂಟಿ ಯೋಜನೆಯನ್ನು ಬಿಡುಗಡೆ ಮಾಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕ ರಾಹುಲ್ ಗಾಂಧಿ ಅವರು ಘೋಷಿಸಿರುವ ಗ್ಯಾರಂಟಿಗಳು ದೇಶದ ಅರ್ಧದಷ್ಟು ಮಹಿಳೆಯರಿಗೆ ನ್ಯಾಯ ದೊರಕಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾಲಕ್ಷ್ಮೀ ಗ್ಯಾರಂಟಿಯಡಿ ಬಡ ಕುಟುಂಬಕ್ಕೆ ವಾರ್ಷಿಕ 1 ಲಕ್ಷ ಕೊಡುವುದಾಗಿ ಘೋಷಣೆ ಮಾಡಿದ್ದೇವೆ. ಅಧಿಕಾರ್ ಮೈತ್ರಿ ಮೂಲಕ ದೌರ್ಜನ್ಯಕ್ಕೆ ತುತ್ತಾದ ಹೆಣ್ಣು ಮಕ್ಕಳಿಗೆ ಕಾನೂನಿನ ನೆರವು ದೊರೆಯಲಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಕೀಲರನ್ನು ನೇಮಕ ಮಾಡಲಾಗುತ್ತಿದೆ. ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ, ಆಶಾ ಕಾರ್ಯಕರ್ತೆಯರ ಸಂಬಳ ದ್ವಿಗುಣ, ಉದ್ಯೋಗ ನಿರತ ಮಹಿಳೆಯರಿಗಾಗಿ ಅಕ್ಷರದ್ವ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಹಾಸ್ಟೆಲ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

ಕರ್ನಾಟಕದ ಗ್ಯಾರಂಟಿಗಳನ್ನು ಟೀಕೆ ಮಾಡುತ್ತಿದ್ದ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯನ್ನು ಕಾಪಿ ಮಾಡಿದ್ದಾರೆ. 10 ವರ್ಷಗಳಿಂದ ಅಧಿಕಾರದಲ್ಲಿದ್ದು ಕೊಟ್ಟ ಭರವಸೆ ಈಡೇರಿಸಲಾಗದೇ ಈಗ ಮತ್ತೊಮ್ಮೆ ಗ್ಯಾರೆಂಟಿಗಳ ಮೂಲಕ ಅವಕಾಶ ಕೇಳುತ್ತಿದ್ದಾರೆ ಎಂದು ಟೀಕಿಸಿದರು.

10 ವರ್ಷಗಳ ಆಡಳಿತದಲ್ಲಿ ಒಮ್ಮೆಯೂ ಪ್ರಧಾನಿ ಮೋದಿ ಪತ್ರಿಕಾಗೋಷ್ಠಿ ನಡೆಸಲಿಲ್ಲ. ಪ್ರಶ್ನೆಗಳನ್ನು ಎದುರಿಸಲಾಗದೇ ಮನ್ ಕಿ ಬಾತ್ ನಲ್ಲಿ ಮಾತಾಡುತ್ತಿದ್ದಾರೆ. ಚುನಾವಣಾ ಬಾಂಡ್ ಹಗರಣ ಬೆಳಕಿಗೆ ಬಂದಿದೆ. ಇದಕ್ಕೆಲ್ಲಾ ಯಾರು ಉತ್ತರಿಸಬೇಕು? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ನ್ಯಾಯಯುತ ತೆರಿಗೆ ಹಣ ಕೊಡದೇ ಮಹಾಮೋಸ ಮಾಡಲಾಗುತ್ತಿದೆ. ಕರ್ನಾಟಕದ ಹಣವನ್ನು ಬೇರೆ ರಾಜ್ಯಗಳಿಗೆ ಹಂಚುತ್ತಿದ್ದಾರೆ. ಹಾಗಾಗಿ ಕರ್ನಾಟಕದ ಜನತೆ ಬಿಜೆಪಿ ನಾಯಕರ ಆಶ್ವಾಸನೆಯನ್ನು ನಂಬಬಾರದು ಎಂದು ಎಚ್ಚರಿಸಿದರು.

ಮಾಜಿ ಮಹಾಪೌರರಾದ ಪುಷ್ಪಾಲತಾ ಚಿಕ್ಕಣ್ಣ, ಮೋದಾಮಣಿ, ಉಪ ಮೇಯರ್ ಪುಷ್ಪವಲ್ಲಿ, ಮುಖಂಡರಾದ ರಾಧಾಮಣಿ, ಡಾ.ಸುಜಾತಾರಾವ್, ಲತಾ ಮೋಹನ್, ಭವ್ಯ, ಚಂದ್ರಕಲಾ, ಇಂದ್ರ, ಸುಶೀಲಾ ಮರಿಗೌಡ ಕಾರ್ಯಕ್ರಮದಲ್ಲಿದ್ದರು.

Tags:
error: Content is protected !!