ಮೈಸೂರು: ರಾಜ್ಯದಲ್ಲಿ ನಾಳೆ (ಏ. 26) ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಒಟ್ಟು 14 ಕ್ಷೇತ್ರಗಳು ಸಕಲ ಸಿದ್ದತೆ ಮಾಡಿಕೊಂಡಿವೆ. ಅದರಲ್ಲೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಶುಕ್ರವಾರ ಬೆಳ್ಳಿಗೆ 7ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದ್ದು, ಒಟ್ಟು 20,92,222 ಮಂದಿ ಮತದಾರರಿದ್ದಾರೆ. ಇದರಲ್ಲಿ ಪುರುಷರು 10,26,324ಇದ್ದರೇ, ಮಹಿಳಾ ಮತದಾರರು 10,65,714ಇದ್ದಾರೆ. ಇತರರು 184 ಮಂದಿ ಈ ಬಾರಿ ಮತದಾನದಲ್ಲಿ ಭಾಗವಹಿಸಲಿದ್ದಾರೆ. ಕ್ಷೇತ್ರದಾದ್ಯಂತ ಒಟ್ಟು 2202 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು, ಅದರಲ್ಲಿ 435 ಸೂಕ್ಷ್ಮ ಮತಗಟ್ಟೆಗಳನ್ನು ಗುರತಿಸಲಾಗಿದೆ. ಒಟ್ಟು 9809 ಮಂದಿ ಮತಗಟ್ಟೆ ಸಿಬ್ಬಂದಿಗಳನ್ನು ಸಹಾ ನೇಮಕ ಮಾಡಲಾಗಿದೆ.
ಇನ್ನು ಮಾಸ್ಟರಿಂಗ್ ನಂತರ ವಿವಿಧ ಮತಗಟ್ಟೆಗಳಿಗೆ ತೆರಳಲು 473 ಕೆಎಸ್‌ಆರ್‌ಟಿಸಿ ಬಸ್‌ಗಳು, 33 ಜೀಪ್‌ಗಳು ಮತ್ತು 79 ಮಿನಿ ಬಸ್‌ಗಳನ್ನು ನೇಮಿಸಲಾಗಿದೆ. ವಿಕಲ ಚೇತನರಿಗೆ ನೇರ ಮತಗಟ್ಟೆ ಪ್ರವೇಶ, ಮತಗಟ್ಟೆಯಲ್ಲಿ ಪ್ರಥಮ ಚಿಕಿತ್ಸೆಯ ಮೆಡಿಕಿಟ್ ಹಾಗೂ ನೀರು ಸರಬರಾಜು ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.



