ಮೈಸೂರು : ರಾಜ್ಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಅನುದಾನ ಹಂಚಿಕೆ ಮಾಡುವಾಗ ಯಾವ ಕ್ಷೇತ್ರಕ್ಕೆ ಕೊಡಬೇಕು, ಯಾರಿಗೆ ಕೊಡಬಾರದು ಎಂಬುದನ್ನು ಕಾಂಗ್ರೆಸ್ ಪಕ್ಷದವರು ತೀರ್ಮಾನ ಮಾಡುತ್ತಿದ್ದಾರೆ ಎಂದು ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಕಿಡಿಕಾರಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಬೇಕಾಬಿಟ್ಟಿಯಾಗಿ ಅನುದಾನ ಕೊಡುತ್ತಿದೆ. ಕಾಂಗ್ರೆಸ್ ಪಕ್ಷದ ಶಾಸಕರಿಗೆ ಹೆಚ್ಚು ಅನುದಾನ ಕೊಡುತ್ತಿದ್ದಾರೆ. ಜಾ.ದಳ ಮತ್ತು ಬಿಜೆಪಿ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಕಡಿಮೆ ಅನುದಾನ ಕೊಡಲಾಗುತ್ತಿದೆ. ಎಲ್ಲರನ್ನೂ ಸಮನಾಗಿ ಕಾಣಬೇಕು ಎಂದು ನಾವು ಮನವಿ ಮಾಡುತ್ತೇವೆ. ಎಲ್ಲಾ ಪಕ್ಷದ ಶಾಸಕರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು ಎಂದು ಹೇಳಿದರು.
ವಿಧಾನಸೌಧದ ಮೆಟ್ಟಿಲ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿದ್ದಿದ್ದರಿಂದ ರಾಜ್ಯ ಸರ್ಕಾರವೂ ಬೀಳುತ್ತೇ ಎಂಬ ವಿಚಾರಕ್ಕೆ ನಾನೇನೂ ಮಾತನಾಡಲಾರೆ. ಯಾರೋ ಬಿದ್ದಾಕ್ಷಣ ಸರ್ಕಾರ ಬೀಳುವುದಿಲ್ಲ. ಕಾಂಗ್ರೆಸ್ ೧೪೦ ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿರುವ ಕಾರಣ ಭದ್ರವಾಗಿ ಇದೆ. ಸರ್ಕಾರ ಬೀಳುತ್ತಾ ಅಥವಾ ಇಲ್ಲವೇ ಏನು ಎಂಬುದನ್ನು ಆ ಪಕ್ಷದವರನ್ನೇ ಕೇಳಬೇಕು. ರಾಜ್ಯ ಸರ್ಕಾರದ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜಾ ದಳ ನಾಯಕರಾಗಲೀ ಅಥವಾ ಬಿಜೆಪಿ ನಾಯಕರು ಸರ್ಕಾರ ಬೀಳಿಸುತ್ತೇವೆ ಎಂದು ಹೇಳಿಲ್ಲ. ಕಾಂಗ್ರೆಸ್ ಪಕ್ಷದವರೇ ಸರ್ಕಾರ ಬೀಳಿಸುತ್ತಾರೆ ಅನಿಸುತ್ತದೆ ಎಂದು ಕುಟುಕಿದರು.
ಎಲ್ಲ ಕ್ಷೇತ್ರಗಳಲ್ಲೂ ಮತದಾರರು ಅಭಿವೃದ್ಧಿ ಬಯಸುತ್ತಾರೆ. ಚುನಾವಣೆ ವೇಳೆ ಪಕ್ಷ. ಗೆದ್ದ ಮೇಲೆ ಪಕ್ಷ ಇಲ್ಲದೆ ಅಭಿವೃದ್ಧಿ ಪರವಾಗಿ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ನಿಖಿಲ್ ಕುಮಾರಸ್ವಾಮಿ ಅವರನ್ನು ಜಾ.ದಳ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ವಿಚಾರಕ್ಕೆ ಸಂಬಂಽಸಿದಂತೆ ಪ್ರತಿಕ್ರಿಯಿಸಿ, ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ನಿಖಿಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ನಿಖಿಲ್ ಅವರು ಪಕ್ಷ ಸಂಘಟನೆ ಮಾಡಲಿಕ್ಕೆ ಸಾಮಾನ್ಯ ಕಾರ್ಯಕರ್ತನಾಗಿ ಮುಂದೆ ಬಂದಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತೆ, ಅಽಕಾರ ಸಿಗುತ್ತೆ ಅಂತೇನೂ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಿಲ್ಲ ಎಂದು ಪಕ್ಷದ ನಾಯಕರ ಕ್ರಮವನ್ನು ಸಮರ್ಥಿಸಿಕೊಂಡರು.
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಮುಗಿದು ಎಷ್ಟು ವರ್ಷಗಳು ಆಯಿತು ಎಂಬುದು ಜನರಿಗೆ ಗೊತ್ತಿದೆ. ಈ ಸರ್ಕಾರಕ್ಕೆ ಇನ್ನೂ ಚುನಾವಣೆ ಮಾಡಲಿಕ್ಕೆ ಆಗಿಲ್ಲ. ನನ್ನ ಪ್ರಕಾರ ಈ ಸರ್ಕಾರ ಇರುವವರೆಗೂ ಕೂಡ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲಿಕ್ಕೆ ಸಾಧ್ಯವಿಲ್ಲ ಎನಿಸುತ್ತಿದೆ. ಪಕ್ಷದ ಕಾರ್ಯಕರ್ತರಿಗೆ ಅಽಕಾರವಿಲ್ಲ, ಇದರಿಂದ ಬಹಳ ಅನಾನುಕೂಲ ಆಗುತ್ತಿದೆ. ಪರಿಣಾಮ ಕಾರ್ಯಕರ್ತರು ಕೆಲಸ ಮಾಡಲು ಆಗುತ್ತಿಲ್ಲ. ನಗರಸಭೆ, ಮಹಾನಗರಪಾಲಿಕೆ, ಜಿಲ್ಲಾ ಪಂಚಾಯಿತಿ , ತಾಲ್ಲೂಕು ಪಂಚಾಯಿತಿಗಳ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಕ್ಕೆ ಪ್ರಜಾಪ್ರಭುತ್ವ ಹಾಗೂ ಅಧಿಕಾರ ವೀಕೇಂದ್ರೀಕರಣ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಕೆಲವು ನಾಯಕರು ಬರೀ ಮಾತನಾಡುತ್ತಿದ್ದಾರೆಯೇ ಹೊರತು ಅದನ್ನು ಬಲಪಡಿಸುವ ಕೆಲಸ ಮಾಡುತ್ತಿಲ್ಲ ಎಂದರು.





