ಮೈಸೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿರುವಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಕಾಲಾ ಕುಮಾರಸ್ವಾಮಿ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ. ಈ ಬಗ್ಗೆ ಪಕ್ಷದ ಅಧ್ಯಕ್ಷರು ಶಿಸ್ತುಪಾಲನಾ ಸಮಿತಿಗೆ ವರದಿ ನೀಡಿದಾಗ ಸಮಿತಿ ಅಧ್ಯಕ್ಷ ರಹೀಂಖಾನ್ ಅವರು ಅಗತ್ಯವಿದ್ದರೆ ಶಿಸುಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಇಂದು(ನ.18) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆ ಕಾಂಗ್ರೆಸ್ ಪಕ್ಷದ ಶಿಸ್ತು ಸಮಿತಿ ಅದ್ಯಕ್ಷನಾಗಿದ್ದೆ. ಆ ವೇಳೆ ಪಕ್ಷಕ್ಕೆ ಯಾವುದೇ ರೀತಿಯಾಗಿ ಹಾನಿಯಾಗದಂತೆ ಎಚ್ಚರವಹಿಸುತ್ತಿದ್ದೆ. ಅಲ್ಲದೇ ಅವಹೇಳನಕಾರಿ ಹೇಳಿಕೆ ನೀಡುವ ಯಾವುದೇ ನಾಯಕರನ್ನು ನೋಟಿಸ್ ನೀಡಿ ಕರೆಸಿ ವಿಚಾರಣೆ ನಡೆಸುತ್ತಿದ್ದವು. ಅಗತ್ಯವಿದ್ದರೆ ಅವರು ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ಅಮಾನತು ಕೂಡ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಬಿಜೆಪಿಯ ಶೇ.40% ಕಮಿಷನ್ ಆರೋಪಕ್ಕೆ ದಾಖಲೆ ಇಲ್ಲವೆಂದು ಉಲ್ಲೇಖಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರವಾಗಿ ಲೋಕಾಯುಕ್ತ ಪೊಲೀಸರು ಯಾವ ಆಧಾರದ ಮೇಲೆ ಸಾಕ್ಷಿ ಇಲ್ಲ ಎಂದಿದ್ದಾರೆ ಎಂಬುದನ್ನು ನೋಡಬೇಕಿದೆ. ಅಗತ್ಯವಿದ್ದರೆ ಈ ವಿಚಾರದ ಬಗ್ಗೆ ಮರು ತನಿಖೆಗೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.