ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿಲುವನ್ನು ಸ್ವಾಗತಿಸಿರುವ ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್, ಆಕ್ಷೇಪ ಎತ್ತಿರುವ ಪ್ರತಾಪ್ ಸಿಂಹ ಹಾಗೂ ಇತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾತನಾಡಿದ ವಿಶ್ವನಾಥ್, ಬಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಬಾನು ಮುಷ್ತಾಕ್ ಅವರು ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಬಾನು ಮುಷ್ತಾಕ್ ಕೃತಿಯನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದ ದೀಪಾಬಸ್ತಿಯವರಿಗೂ ಬೂಕರ್ ಪ್ರಶಸ್ತಿ ನೀಡಲಾಗಿದೆ. ಇದು ಸಂತಸನ ವಿಚಾರ ಎಂದಿದ್ದಾರೆ.
ನಿನ್ನ ಬೆತ್ತಲೆ ಜಗತ್ತು ಪುಸ್ತಕಕ್ಕೆ ಬೂಕರ್ ಸಿಕ್ಕಿದ್ಯಾ ಹೇಳು ಎಂದು ಮಾಜಿ ಸಂಸದ ಪ್ರತಾಪ ಸಿಂಹನನ್ನು ಪ್ರಶ್ನಿಸಿದ ಅವರು, ಚರಿತ್ರೆಯನ್ನು ತಿಳಿದು ಮಾತನಾಡಬೇಕು. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ರನ್ನು ಮಹಾರಾಜರೂ ಅಂಬಾರಿ ಮೇಲೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಿದ್ದರು. ಇದು ಸಮಾನತೆಯ ದೇಶ ಎಂದು ಹೇಳಿದರು.
ಬಾನು ಹಾಗೂ ದೀಪ ಬಸ್ತಿ ಇಬ್ಬರಿಗೂ ಸಮಾನವಾಗಿ ಬೂಕರ್ ಪ್ರಶಸ್ತಿ ನೀಡಲಾಗಿದೆ. ಬಾನು ಮುಷ್ತಾಕ್ ಬಹಳ ಸಾಧನೆ ಮಾಡಿದ್ದಾರೆ. ರೈತ ಚಳವಳಿ, ಭಾಷಾ ಚಳವಳಿ, ವಕೀಲ ವೃತ್ತಿ ಸೇರಿದಂತೆ ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಆದರೆ ಕೆಲವರು ಇವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮದು ಬಹುತ್ವದ ದೇಶವಾಗಿದೆ. ಮಂತ್ರಿಗಳಾಗಿದ್ದವರೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪ್ರತಾಪ್ ಸಿಂಹ ಪ್ರತಾಪಿಯಂತೆ ಮಾತನಾಡುತ್ತಿದ್ದಾರೆ. ಪಾರ್ಲಿಮೆಂಟ್ ಮೆಂಬರ್ ಆಗಿದ್ದವರು ಮಹಿಳಾ ಸಾಧಕಿಯ ವಿರುದ್ಧ ಮಾತನಾಡುವುದು ಸರಿಯಲ್ಲ. ಈ ಮೂಲಕ ಮೈಸೂರನ್ನು ಏನು ಮಾಡಬೇಕು ಎಂದುಕೊಂಡಿದ್ದೀರಿ?. ದಸರಾ ಎಂದರೆ ಕಡಲೆಕಾಯಿ ಮಾರುವವನಿಂದ ಹಿಡಿದು ಸಿಹಿ ಮಾರಾಟ ಮಾಡುವವರೆಗೆ ಎಲ್ಲಾ ವರ್ಗದ ಜನರಿಗೆ, ಪ್ರವಾಸೋದ್ಯಮಕ್ಕೆ ಆಸರೆ ನೀಡುತ್ತದೆ. ಆರ್.ಅಶೋಕ್ ಮಾತು ಶೇಮ್ ಶೇಮ್. ವಿರೋಧ ಪಕ್ಷದ ನಾಯಕನಾಗಿದ್ದುಕೊಂಡು ಜನಾಂಗೀಯ ದ್ವೇಷ ಹಂಚುವ ಮಾತನಾಡಬಾರದು. ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದಲ್ಲ ಎನ್ನುವುದು ತಪ್ಪು, ಅದೇ ರೀತಿ ಹಿಂದೂಗಳಿಗೆ ಸೇರಿದ್ದು ಎನ್ನುವುದು ಸಹ ತಪ್ಪು. ಪೈಪೋಟಿಯ ಮೇಲೆ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಪ್ರತಾಪ್ ಸಿಂಗ ಹಾಗೂ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಸ್ಪಷ್ಟನೆ ನೀಡಲಿ
ಇನ್ನು ಮುಂದುವರಿದು ಮಾತನಾಡಿದ ಅವರು, ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಲು ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು. ಸರ್ಕಾರ ಆಹ್ವಾನಿಸಿರುವ ಬಗ್ಗೆ ಮಾತನಾಡಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಮಾತನಾಡಬೇಕು. ಬಾನು ಮುಷ್ತಾಕ್ ಜೊತೆಗೆ ದೀಪಾ ಬಸ್ತಿಯವರನ್ನು ಕೂಡ ಕರೆದು ಅರಮನೆ ಮುಂಭಾಗದಲ್ಲಿ ಸನ್ಮಾನಿಸಿ ಅಭಿನಂದಿಸಬೇಕು. ಬಾನು ಮುಷ್ತಾಕ್ ದಸರಾ ಉದ್ಘಾಟಿಸಿದ ಬಳಿಕ ಅರಮನೆ ಆವರಣದಲ್ಲಿ ಇಬ್ಬರನ್ನೂ ಸನ್ಮಾನಿಸಿ ಅಭಿನಂದಿಸಬೇಕು. ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಬಾನು ಮುಷ್ತಾಕ್ ಚಾಮುಂಡಿ ಬೆಟ್ಟ ಹತ್ತಲು ಬಿಡುವುದಿಲ್ಲ ಎಂದಿದ್ದಾರೆ. ಚಾಮುಂಡಿ ಬೆಟ್ಟ ಯಾವುದೇ ಒಂದು ಜಾತಿ, ಧರ್ಮದ ಆಸ್ತಿಯಲ್ಲ. ಚಾಮುಂಡಿ ಬೆಟ್ಟ ಸರ್ಕಾರದ ಆಸ್ತಿಯಾಗಿದೆ ಎಂದರು.





